ಲೇಖಕ ಡಾ. ಜೆರಿ ನಿಡ್ಡೋಡಿ ಅವರಿಗೆ ರಾಕ್ಣೊ ಪ್ರಶಸ್ತಿ ಪ್ರದಾನ

Spread the love

ಲೇಖಕ ಡಾ. ಜೆರಿ ನಿಡ್ಡೋಡಿ ಅವರಿಗೆ ರಾಕ್ಣೊ ಪ್ರಶಸ್ತಿ ಪ್ರದಾನ

ಮಂಗಳೂರು : ಸಂವಹನದಲ್ಲಿ ಕೊಂಕಣಿಯನ್ನು ಕೈಬಿಡುವುದರಿಂದ ಕೊಂಕಣಿ ಸಮುದಾಯವು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ವಂ. ಡಾ. ಪೀಟರ್ ಪೌಲ್ ಸಲ್ಡಾನ ಹೇಳಿದ್ದಾರೆ.

ನಗರದ ಬಿಜೈ ಚರ್ಚ್ ಹಾಲ್‌ನಲ್ಲಿ ರವಿವಾರ ನಡೆದ ಕೊಂಕಣಿ ವಾರಪತ್ರಿಕೆ ‘ರಾಕ್ಣೊ’ ವತಿಯಿಂದ ‘ರಾಕ್ಣೊ ಪ್ರಶಸ್ತಿ 2026’ ಪ್ರದಾನ, ಪುಸ್ತಕ ಬಿಡುಗಡೆ ಹಾಗೂಕೊಂಕಣಿ ಬರಹಗಾರರು ಮತ್ತು ಓದುಗರ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಂಕಣಿಯನ್ನು ‘ಹೃದಯದ ಅತ್ಯಂತ ಪ್ರೀತಿಯ ಭಾಷೆ’ ಎಂದು ಬಣ್ಣಿಸಿದ ಬಿಷಪ್ ಅವರು ಅದರ ಬೆಳವಣಿಗೆಯನ್ನು ನಿರಂತರವಾಗಿ ಪೋಷಿಸುತ್ತಿರುವ ‘ರಾಕ್ಣೊ’ ಪತ್ರಿಕೆಯನ್ನು ಶ್ಲಾಘಿಸಿದರು.

ತಮ್ಮದೇ ಸಾಹಿತ್ಯಿಕ ಪಯಣವನ್ನು ಮೆಲುಕು ಹಾಕಿದ ಅವರು, ತಾನು ಕೊಂಕಣಿಯಲ್ಲಿ ಬರೆಯಲು ಕಲಿತಿದ್ದೇ ಈ ಪತ್ರಿಕೆಯ ಮೂಲಕ ಎಂದರು.

ದೈನಂದಿನ ಸಂಭಾಷಣೆಗಳಲ್ಲಿ ಕೊಂಕಣಿ ಸಂಖ್ಯೆಗಳು ಮತ್ತು ಶಬ್ದಕೋಶಗಳ ಬಳಕೆಗೆ ಒತ್ತು ನೀಡುವ ಮೂಲಕ ಯುವಕರು ಮತ್ತು ಮಕ್ಕಳಲ್ಲಿ ಮಾತನಾಡುವ ಭಾಷೆಯನ್ನು ಸಕ್ರಿಯವಾಗಿ ಉತ್ತೇಜಿಸಲು ಕರೆ ನೀಡಿದರು.

ಲೇಖಕ ಡಾ. ಜೆರಿ ನಿಡ್ಡೋಡಿ ಅವರಿಗೆ ರಾಕ್ಣೊ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಧರ್ಮಕೇಂದ್ರದ ನಿಯತಕಾಲಿಕೆ ಪ್ರಶಸ್ತಿಯನ್ನು ಆಂಜೆಲೊರ್ ಚರ್ಚ್‌ನ ‘ಅಂಜೆಲೊರ್ಚೊ ಆಂಜ್ ಪತ್ರಿಕೆಗೆ ನೀಡಲಾಯಿತು. ಪತ್ರಿಕೆಯ ಸಂಪಾದಕ ರೋಶನ್ ಪತ್ರಾವೊ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಾ. ಎಡ್ವರ್ಡ್ ನಜರೆತ್ ಮತ್ತು ಫ್ರಾನ್ಸಿಸ್ ಡಿಕುನ್ಹಾ ಅಭಿನಂದನಾ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ, ಬುಡ್ಕುಲೊ ಮೀಡಿಯಾದ ಡೊನಾಲ್ಡ್ ಪಿರೇರಾ ಅವರ ಚೊಚ್ಚಲ ಸಣ್ಣ ಕಥೆಗಳ ಸಂಕಲನ ‘ಮೊಗಾಚಿ ಸುನಾಮಿ’ ಪುಸ್ತಕವನ್ನು ಬಿಷಪ್ ಬಿಡುಗಡೆಗೊಳಿಸಿದರು.

ಸಮರ್ಪಿತ ಸೇವೆಯನ್ನು ಗುರುತಿಸಿ ವಂ. ಫಾದರ್ ಫೆನಾರ್ಂಡಿಸ್ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಮ್ ಸ್ಟ್ಯಾನಿ ಆಲ್ವಾರಿಸ್, ರಾಕ್ಣೊ ಮಾಜಿ ಸಂಪಾದಕ ಹಾಗೂ ಸಂಪನ್ಮೂಲ ವ್ಯಕ್ತಿ ವಂ. ಫಾದರ್ ವಲೇರಿಯನ್ ಫೆರ್ನಾಂಡಿಸ್‌ ಬಿಜೈ ಚರ್ಚ್‌ನ ಧರ್ಮಗುರು ವಂ. ಫಾದರ್ ಸ್ಟ್ಯಾನಿ ಪಿರೇರಾ, ಉಪಾಧ್ಯಕ್ಷ ನಿರ್ಮಲ್ ಡಿ ಸೋಜ ಮತ್ತು ಕಾರ್ಯದರ್ಶಿ ಅವಿತಾ ಪಿಂಟೊ ಉಪಸ್ಥಿತರಿದ್ದರು.

ಕೊಂಕಣಿ ವಿದ್ವಾಂಸ ವಂ. ಫಾದರ್ ಜೇಸನ್ ಲೋಬೊ ‘ಕ್ರಿಸ್ತ ಪುರಾಣ’ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಸಾಂಪ್ರದಾಯಿಕ ಸ್ವಾಗತ ನೃತ್ಯ ಜರುಗಿತು. ರಾಕ್ಣೊ ಸಂಪಾದಕರಾದ ವಂ. ಫಾದರ್ ರೂಪೇಶ್ ಮಾಡ್ತಾ ಸ್ವಾಗತಿಸಿದರು. ಗಾಡ್ವಿನ್ ಪಿಂಟೊ ವಂದಿಸಿದರು. ತಾರಾ ಲವಿ ಗಂಜಿಮಠ ಕಾರ್ಯಕ್ರಮ ನಿರೂಪಿಸಿದರು. ಪ್ರಮೋದ್ ರೊಡ್ರಿಗಸ್ ಹಾಗೂ ಫಾ. ಗ್ರೇಶನ್ ಅಲ್ವಾರಿಸ್ ಸಹಕಾರ ನೀಡಿದರು.


Spread the love
Subscribe
Notify of

0 Comments