ಹೆಜಮಾಡಿ–ಪಡುಬಿದ್ರಿ ಟೋಲ್ ಸಮಸ್ಯೆ: ಸಚಿವರಿಗೆ ನಿಯೋಗದಿಂದ ಮನವಿ 

Spread the love

ಹೆಜಮಾಡಿ–ಪಡುಬಿದ್ರಿ ಟೋಲ್ ಸಮಸ್ಯೆ: ಸಚಿವರಿಗೆ ನಿಯೋಗದಿಂದ ಮನವಿ 

ಬೆಂಗಳೂರು: ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜನರು ಎದುರಿಸುತ್ತಿರುವ ಟೋಲ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದ ಹೆಜಮಾಡಿ–ಪಡುಬಿದ್ರಿ ಟೋಲ್ ಹೋರಾಟ ಕಾರ್ಯಕಾರಿ ಸಮಿತಿ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಆರೋಗ್ಯ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯ ನಿವಾಸಿಗಳು ಟೋಲ್ ಸಂಗ್ರಹಣೆಯಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದ ನಿಯೋಗವು, ಸ್ಥಳೀಯರಿಗೆ ಶಾಶ್ವತ ಟೋಲ್ ವಿನಾಯಿತಿ ಅಥವಾ ಸ್ಥಳೀಯ ಪಾಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿತು. ಅಲ್ಲದೆ, PWD ರಸ್ತೆಯಲ್ಲಿ ನಡೆಯುತ್ತಿರುವ ಟೋಲ್ ಸಂಗ್ರಹಣೆಯ ಕಾನೂನುಬದ್ಧತೆಯನ್ನು ಪರಿಶೀಲಿಸುವುದು ಹಾಗೂ ಸ್ಥಳೀಯ ವಾಹನಗಳಿಗೆ ಅನಗತ್ಯ ತೊಂದರೆ ನೀಡುವುದನ್ನು ತಪ್ಪಿಸುವಂತೆ ಮನವಿ ಮಾಡಲಾಯಿತು.

ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಜನರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿಯೋಗ ಒತ್ತಾಯಿಸಿತು. ಮನವಿ ಸ್ವೀಕರಿಸಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಅಧ್ಯಕ್ಷ ವೈ. ಸುಕುಮಾರ್, ಕೆಪಿಸಿಸಿ ಕೋಆರ್ಡಿನೇಟರ್‌ಗಳಾದ ನವೀನ್ ಚಂದ್ರ ಜೆ. ಶೆಟ್ಟಿ, ಅಬ್ದುಲ್ ಅಜೀಜ್ ಹೆಜಮಾಡಿ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭೋದ್ ಚಂದ್ರ ಹೆಜಮಾಡಿ, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೀಜ್ ಹುಸೇನ್, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಕಾಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೇಶವ್ ಸಿ. ಸಾಲ್ಯಾನ್ ಹಾಗೂ ಲಕ್ಷ್ಮೀಶ ತಂತ್ರಿ ಉಪಸ್ಥಿತರಿದ್ದರು.


Spread the love
Subscribe
Notify of

0 Comments