ಫೆ.11: ತೊಟ್ಟಂ ಸಂತ ಅನ್ನಮ್ಮನವರ ನವೀಕೃತ ಚಾಪೆಲ್ (ಕಿರು ಇಗರ್ಜಿ) ಉದ್ಘಾಟನೆ

Spread the love

ಫೆ.11: ತೊಟ್ಟಂ ಸಂತ ಅನ್ನಮ್ಮನವರ ನವೀಕೃತ ಚಾಪೆಲ್ (ಕಿರು ಇಗರ್ಜಿ) ಉದ್ಘಾಟನೆ

ಉಡುಪಿ: ಮಲ್ಪೆ ಸಮೀಪದ ತೊಟ್ಟಂ ನಲ್ಲಿ ನವೀಕೃತಗೊಂಡ ಸಂತ ಅನ್ನಮ್ಮ ಚಾಪೆಲ್ (ಕಿರು ದೇವಾಲಯ)ನ ಉದ್ಘಾಟನೆ ಮತ್ತು ಆಶೀರ್ವಚನ ಫೆಭ್ರವರಿ 11 ರಂದು ಬುಧವಾರ ಅವರು ಸಂಜೆ 4.30ಕ್ಕೆ ನಡೆಯಲಿದೆ.

 

ನವೀಕೃತ ಚಾಪೆಲ್ ಅನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸಿ ಪವಿತ್ರ ಬಲಿಪೂಜೆಯೊಂದಿಗೆ ಆಶೀರ್ವಚನಗೈಯ್ಯಲಿದ್ದಾರೆ. ಬಲಿಪೂಜೆಯ ಬಳಿಕ ಜಪಸರ ಪ್ರಾರ್ಥನೆ ಜರುಗಲಿದ್ದು ತದನಂತರ ಕಿರು ದೇವಾಲಯದಿಂದ ಮುಖ್ಯ ದೇವಾಲಯದ ವರೆಗೆ ಮೇಣದ ಬತ್ತಿಗಳನ್ನು ಹಿಡಿದು ಮೆರವಣಿಗೆ ನಡೆಯಲಿದೆ. ಬಳಿಕ ಕಿರು ಸಭಾ ಕಾರ್ಯಕ್ರಮದಲ್ಲಿ ಕಿರು ದೇವಾಲಯದ ನವೀಕರಣಕ್ಕೆ ಸಹಕರಿಸದವರಿಗೆ ಗೌರವಿಸಲಾಗುವುದು.

ಹಲವರು ವರ್ಷಗಳ ಹಿಂದೆ ಕೆಥೊಲಿಕ್ ಬಂಧುಗಳು ತಮ್ಮ ಆಧ್ಯಾತ್ಮಿಕ ಸೇವೆಗಳಿಗಾಗಿ ಕಲ್ಯಾಣಪುರ ಮಿಲಾಗ್ರಿಸ್ ಮಾತೆಯ ದೇವಾಲಯವನ್ನು ಅವಲಂಬಿಸಿದ್ದು, 1850 ರಲ್ಲಿ ತೊಟ್ಟಾಮ್ ಗ್ರಾಮದ ಪ್ರಭಾವಿ ವ್ಯಕ್ತಿಯಾಗಿದ್ದ ದಿವಂಗತ ಮಿಗೇಲ್ ವಾಜ್ ಅವರು ತಮ್ಮ ಮನೆಯ ಸಮೀಪ ಒಂದು ದೇವಾಲಯ ನಿರ್ಮಾಣವಾಗಬೇಕು ಎಂಬ ಆಸೆಯಿಂದ ಗೋವಾ ಧರ್ಮಕ್ಷೇತ್ರದ ಬಿಷಪ್ ಅವರ ಅನುಮತಿ ಪಡೆದು 1885 ರಲ್ಲಿ ನಿರ್ಮಾಣ ಕಾರ್ಯ ಆರಂಭಿಸಿ 1905 ಮೇ 24 ರಂದು ಚಾಪೆಲ್ ಉದ್ಘಾಟನೆಗೊಂಡಿತು.

1933 ಮೇ 19 ರಂದು ತೊಟ್ಟಂ ಸಂತ ಅನ್ನಮ್ಮ ಮಾತೆಗೆ ಸಮರ್ಪಿತ ಸ್ವತಂತ್ರ ದೇವಾಲಯದ ನಿರ್ಮಾಣವಾದ ಬಳಿಕ ಚರ್ಚಿನ ಆಡಳಿತಕ್ಕೆ ಚಾಪೆಲ್ ಮೇಲ್ವಿಚಾರಣೆ ಬಂದು ವಾರಕ್ಕೆ ಒಂದು ಬಲಿಪೂಜೆ ಅರ್ಪಿಸುವ ನಿರ್ಧಾರ ಕೈಗೊಳ್ಳಲಾಯಿತು.

ಕಾಲಕ್ರಮೇಣ ಜನಸಂಖ್ಯೆ ಹೆಚ್ಚಿದಂತೆ ಚಾಪೆಲ್ ಚಿಕ್ಕದಾಗಿದ್ದು, ಸುಮಾರು 50 ಜನ ಮಾತ್ರ ಒಳಗೆ ಕುಳಿತುಕೊಳ್ಳುವಂತಿತ್ತು. ಉಳಿದವರು ಹೊರಗಡೆ ನಿಲ್ಲಬೇಕಾಗುತ್ತಿತ್ತು. ಇದರಿಂದ ಧಾರ್ಮಿಕ ಹಾಗೂ ಭಕ್ತಿಪರ ಚಟುವಟಿಕೆಗಳಿಗೆ ಸಾಕಷ್ಟು ಸ್ಥಳಾವಕಾಶದ ಕೊರತೆ ಎದುರಾದಾಗ 2010ರಲ್ಲಿ ವಾಜ್ ಕುಟುಂಬವು ಚಾಪೆಲ್ ಅನ್ನು ಸಂಪೂರ್ಣವಾಗಿ ಚರ್ಚಿನ ಅಧೀನಕ್ಕೆ ನಿರ್ಧಾರ ಕೈಗೊಂಡು ಅಂದಿನ ಧರ್ಮಗುರು ವಂ| ಫ್ರೆಡ್ರಿಕ್ ಡಿ’ಸೋಜಾ ಅವರ ಮಾರ್ಗದರ್ಶನದಲ್ಲಿ ಸಂಬಂಧಿತ ದಾಖಲೆಗಳನ್ನು ಸಿದ್ಧಪಡಿಸಿ, ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಆಲೋಶಿಯಸ್ ಡಿ’ಸೋಜಾ ಅವರಿಗೆ ಸಲ್ಲಿಸಿ, ಬಲಿಕ ದುರಸ್ತಿ ಕಾರ್ಯ ಕೈಗೊಂಡು ಜುಲೈ 26 ರಂದು ಸಂತ ಅನ್ನಾ ಮಾತೆಯ ಹಬ್ಬದ ಬಲಿಪೂಜೆಯನ್ನು ಧರ್ಮಾಧ್ಯಕ್ಷರು ಅರ್ಪಿಸಿದರು.

ಕಾಲಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ಮೂಲ ಸೌಲಭ್ಯಗಳ ಕೊರತೆ ಕಂಡುಬಂದಿತು. ಪ್ರಸ್ತುತ ಧರ್ಮಗುರು ವಂ ಡೆನಿಸ್ ಡೆಸಾ ಅವರ ನೇತೃತ್ವದಲ್ಲಿ ಹಾಗೂ ಚರ್ಚಿನ ಸದಸ್ಯರ ಸಹಕಾರದಿಂದ ಚಾಪೆಲ್ ಅನ್ನು ಸಂಪೂರ್ಣ ನವೀಕರಣ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ವಾಜ್ ಕುಟುಂಬ ಈ ನಿರ್ಧಾರವನ್ನು ಸಂತೋಷದಿಂದ ಸ್ವೀಕರಿಸಿ ಸಂಪೂರ್ಣ ಸಹಕಾರ ನೀಡಿತು.

28-05-2024ರಂದು ಹೊಸ ಕಟ್ಟಡದ ಆಶೀರ್ವಚನದೊಂದಿಗೆ ಕಾಮಗಾರಿ ಆರಂಭಗೊಂಡಿದ್ದು, ನವೀಕೃತ ಚಾಪೆಲ್ ಒಳಗೆ ಸುಮಾರು 250 ಜನ ಕುಳಿತುಕೊಳ್ಳುವ ವ್ಯವಸ್ಥೆ ಇದ್ದು, ಹೊರಭಾಗದಲ್ಲಿ ಸುಮಾರು 200 ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಹಿಂದಿನ ಬಲಿಪೀಠವನ್ನು ಹಾಗೆಯೇ ಉಳಿಸಿಕೊಂಡು ಸುಂದರವಾಗಿ ಅಲಂಕರಿಸಲಾಗಿದೆ. ದೇವಾಲಯದ ನವೀಕರಣಕ್ಕೆ ಕರ್ನಾಟಕ ಸರಕಾರದ ಕ್ರೈಸ್ತ ಅಭಿವೃದ್ಧಿ ನಿಗಮದ ಸಹಾಯವನ್ನು ಕೂಡ ಪಡೆಯಲಾಗಿದೆ.

ಸಂತ ಆನ್ನಾ ಮಾತೆಯ ದಯೆಯಿಂದ ಅನೇಕ ಭಕ್ತರಿಗೆ ವರ ದೊರೆತಿದ್ದು, ವಿಶೇಷವಾಗಿ ಮಹಿಳೆಯರಲ್ಲಿ ಅಪಾರ ಭಕ್ತಿ ಇದೆ. ಕೆಲಸ ಆರಂಭಿಸುವ ಮೊದಲು ಅಥವಾ ಪ್ರಯಾಣಕ್ಕೂ ಮುನ್ನ ಸಂತ ಆನ್ನಾ ಮಾತೆಗೆ ನಮಸ್ಕರಿಸುವ ಸಂಪ್ರದಾಯ ಇಲ್ಲಿನ ಜನರಲ್ಲಿ ಸಾಮಾನ್ಯವಾಗಿದೆ ಎಂದು ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments