ಸಂವಿಧಾನಾತ್ಮಕ ಹುದ್ದೆಗೆ ಅವಮಾನ: ವಿಧಾನಸಭೆಯಲ್ಲಿ ಕಾಂಗ್ರೆಸ್ ಅರಾಜಕ ನಡೆ – ಶ್ರೀನಿಧಿ ಹೆಗ್ಡೆ

Spread the love

ಸಂವಿಧಾನಾತ್ಮಕ ಹುದ್ದೆಗೆ ಅವಮಾನ: ವಿಧಾನಸಭೆಯಲ್ಲಿ ಕಾಂಗ್ರೆಸ್ ಅರಾಜಕ ನಡೆ – ಶ್ರೀನಿಧಿ ಹೆಗ್ಡೆ

ಉಡುಪಿ: ಜಿ ರಾಮ್ ಜಿ ಕುರಿತ ಕರ್ನಾಟಕ ವಿಧಾನ ಮಂಡಲದ ಜಂಟಿ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು, ಸಂವಿಧಾನದ ವಿಧಿ 168ರನ್ವಯ ತಮ್ಮ ಸಂವಿಧಾನಬದ್ಧ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ರಾಜ್ಯಪಾಲರು ರಾಜ್ಯ ಸರ್ಕಾರ ಸಿದ್ದಪಡಿಸಿದ್ದ ಭಾಷಣವನ್ನು ಸಾಂಕೇತಿಕವಾಗಿ ಮಂಡಿಸಿರುವುದು ಸಂವಿಧಾನದ ನಿಯಮಗಳ ಉಲ್ಲಂಘನೆಯಲ್ಲ. ಈ ವಿಚಾರವನ್ನು ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್‌ಗಳು ತಮ್ಮ ಅನೇಕ ತೀರ್ಪುಗಳಲ್ಲಿ ಸ್ಪಷ್ಟಪಡಿಸಿವೆ. ಆದರೂ ಕಾಂಗ್ರೆಸ್ ಈ ವಿಷಯದಲ್ಲಿ ಅಸಾಂವಿಧಾನಿಕ ಮತ್ತು ಆರಾಜಕ ನಡೆ ವ್ಯಕ್ತಪಡಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಯಥಾವತ್ತಾಗಿ ಓದಲೇಬೇಕು ಎಂಬ ಸಂವಿಧಾನಾತ್ಮಕ ಬಾಧ್ಯತೆ ಇಲ್ಲ. ರಾಜ್ಯಪಾಲರು ಸಂವಿಧಾನದ ಪಾಲಕರಾಗಿದ್ದು, ಅವರು ಅಸಾಂವಿಧಾನಿಕ, ಸಂಘರ್ಷಪ್ರೇರಿತ ಅಥವಾ ತಪ್ಪು ಮಾಹಿತಿಯುಳ್ಳ ಅಂಶಗಳನ್ನು ತಿರಸ್ಕರಿಸುವ ಸಂಪೂರ್ಣ ವಿವೇಚನಾಧಿಕಾರ ಹೊಂದಿದ್ದಾರೆ. ಇದನ್ನು ತಿಳಿದುಕೊಳ್ಳದೆ ಜಂಟಿ ಅಧಿವೇಶನದ ಆರಂಭದಲ್ಲಿ ರಾಜ್ಯಪಾಲರ ಭಾಷಣದ ನಂತರ ರಾಷ್ಟ್ರಗೀತೆಯನ್ನೂ ನುಡಿಸದೇ, ಅವರನ್ನು ಗೌರವಪೂರ್ವಕವಾಗಿಯೂ ಬೀಳ್ಕೊಡದೇ ಕಾಂಗ್ರೆಸ್ ಸರ್ಕಾರ ಮತ್ತು ಅದರ ಶಾಸಕರು ವರ್ತಿಸಿರುವುದು ಸಂವಿಧಾನಾತ್ಮಕ ಸಂಪ್ರದಾಯಗಳಿಗೆ ವಿರುದ್ಧವಾದುದು. ಇದು ಸಂವಿಧಾನಕ್ಕೆ, ರಾಷ್ಟ್ರಗೀತೆಗೆ ಹಾಗೂ ರಾಜ್ಯಪಾಲರಂತಹ ಉನ್ನತ ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಗಂಭೀರ ಅವಮಾನ ಎಂದು ಶ್ರೀನಿಧಿ ಹೆಗ್ಡೆ ಆಪಾದಿಸಿದ್ದಾರೆ.

ವಿಧಾನಮಂಡಲ ಅಧಿವೇಶನದ ವೇಳೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವಿರುದ್ಧ ತೋರಿದ ಅಶಿಸ್ತಿನ, ಬೆದರಿಕೆ ಒಡ್ದುವಂತಹ ಹಾಗೂ ದಾಳಿಗೆ ಯತ್ನಿಸುವಂತ ರೀತಿಯ ವರ್ತನೆ, ಸಂವಿಧಾನದ ಮೂಲಭೂತ ಮೌಲ್ಯಗಳಾದ Rule of Law, Constitutional Morality ಮತ್ತು Democratic Decorumಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಇಂತಹ ವರ್ತನೆ ಸದನದ ಘನತೆಯನ್ನು ಹಾಳು ಮಾಡುವುದಲ್ಲದೆ, ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳು ಸದನದ ಒಳಗಿನ ಶಿಸ್ತು, ಸಂವಿಧಾನಾತ್ಮಕ ಹುದ್ದೆಗಳ ಗೌರವ ಮತ್ತು ಶಾಸಕರ ನಡೆ ಕುರಿತು ಅನೇಕ ಬಾರಿ ಎಚ್ಚರಿಕೆ ನೀಡಿವೆ. ಸದನದ ಒಳಗೆ ಗೂಂಡಾಗಿರಿ, ಬೆದರಿಕೆ ಅಥವಾ ದೌರ್ಜನ್ಯ ಸಹನೀಯವಲ್ಲ ಎಂಬುದು ನ್ಯಾಯಾಂಗದ ಸ್ಪಷ್ಟ ನಿಲುವು. ಹಿಂದೆ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಪ್ರಕರಣದಲ್ಲಿಯೂ ಕಂಡಂತೆ, ಇಂದು ವಿಧಾನಸಭೆಯಲ್ಲೇ ರಾಜ್ಯಪಾಲರು ತೆರಳುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಅಡ್ಡಿಪಡಿಸಿ ಬೆದರಿಕೆ ಹಾಕಿರುವುದು ಕ್ರಿಮಿನಲ್ ಸ್ವಭಾವದ ಕೃತ್ಯವಾಗಿದ್ದು, ಇದು ಶಾಸಕರ ಸಂವಿಧಾನಾತ್ಮಕ ಹೊಣೆಗಾರಿಕೆಗೆ ವಿರುದ್ಧವಾಗಿದೆ.

ರಾಜ್ಯಪಾಲ ಎಂಬುದು ಕೇವಲ ಹುದ್ದೆಯಲ್ಲ; ಅದು ಸಂವಿಧಾನದ ಪ್ರತಿನಿಧಿ. ಅವರಿಗೆ ನೀಡುವ ಗೌರವ ಸಂವಿಧಾನಕ್ಕೆ ನೀಡುವ ಗೌರವವಾಗಿದೆ. ಈ ಮೂಲಭೂತ ತತ್ವವನ್ನು ಮರೆತು ಕಾಂಗ್ರೆಸ್ ಸರ್ಕಾರ ಮತ್ತು ಅದರ ಶಾಸಕರು ನಡೆದುಕೊಂಡಿರುವುದು ಅಕ್ಷಮ್ಯ ಹಾಗೂ ಅಸಾಂವಿಧಾನಿಕ.

ಸದನವು ರಾಜ್ಯದ ಅಭಿವೃದ್ಧಿ, ಜನಹಿತ ಮತ್ತು ನೀತಿ ಚರ್ಚೆಗಳಿಗೆ ವೇದಿಕೆಯಾಗಬೇಕೇ ಹೊರತು, ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ರಾಜಕಾರಣ ನಡೆಸಲು ಅಥವಾ ಸಂಘರ್ಷ ಸೃಷ್ಟಿಸಲು ಬಳಸುವ ವೇದಿಕೆಯಾಗಬಾರದು. ಈ ರೀತಿಯ ದುರ್ಬಳಕೆ ಒಕ್ಕೂಟ ವ್ಯವಸ್ಥೆಗೆ ಗಂಭೀರ ಧಕ್ಕೆ ಉಂಟುಮಾಡುತ್ತದೆ ಎಂದು ಆರೋಪಿಸಿದ್ದಾರೆ.

ರಾಜ್ಯಪಾಲರ ವಿರುದ್ಧ ನಡೆದ ಅಶಿಸ್ತಿನ ಹಾಗೂ ಅಸಾಂವಿಧಾನಿಕ ವರ್ತನೆಗೆ ನೈತಿಕ ಮತ್ತು ಸಂವಿಧಾನಾತ್ಮಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು. ಸದನದ ಘನತೆಗೆ ಧಕ್ಕೆ ತಂದಿರುವ ಹಾಗೂ ರಾಜ್ಯಪಾಲರಿಗೆ ಅಡ್ಡಿಪಡಿಸಿದ ಸದಸ್ಯರನ್ನು ವಿಧಾನಸಭೆಯ ನಿಯಮಗಳು ಮತ್ತು ಸಂವಿಧಾನಾತ್ಮಕ ಸಂಪ್ರದಾಯಗಳನ್ವಯ ತಕ್ಷಣ ಅಮಾನತು ಮಾಡಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ.

ಬಹುಮತದ ಅಹಂಕಾರದಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ದಾರಿಯಲ್ಲಿ ಸಾಗುತ್ತಿದೆ. ರಾಜ್ಯದ ಜನರು ಈ ಎಲ್ಲವನ್ನು ಗಮನಿಸುತ್ತಿದ್ದಾರೆ. ಸರ್ಕಾರ ತನ್ನ ಅಸಾಂವಿಧಾನಿಕ ನಡವಳಿಕೆಯನ್ನು ತಕ್ಷಣ ಸರಿಪಡಿಸದಿದ್ದರೆ, ಪ್ರಜಾಪ್ರಭುತ್ವದ ಮೂಲಕ ಜನರು ಸೂಕ್ತ ಮತ್ತು ಕಠಿಣ ಉತ್ತರ ನೀಡುವ ದಿನಗಳು ದೂರವಿಲ್ಲ ಎಂದು ಶ್ರೀನಿಧಿ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments