ನೇಪಾಳದಿಂದ ಇನ್ವೆಸ್ಟ್‌ಮೆಂಟ್ ಫ್ರಾಡ್: ನೂರಾರು ಕೋಟಿ ವಂಚನೆ ನಡೆಸಿದ ಅಂತರರಾಷ್ಟ್ರೀಯ ಗ್ಯಾಂಗ್ ಪತ್ತೆ

Spread the love

ನೇಪಾಳದಿಂದ ಇನ್ವೆಸ್ಟ್‌ಮೆಂಟ್ ಫ್ರಾಡ್: ನೂರಾರು ಕೋಟಿ ವಂಚನೆ ನಡೆಸಿದ ಅಂತರರಾಷ್ಟ್ರೀಯ ಗ್ಯಾಂಗ್ ಪತ್ತೆ

  • ಮಂಗಳೂರು ಸೆನ್ ಕ್ರೈಂ ಪೊಲೀಸರಿಂದ 11 ಆರೋಪಿಗಳ ಬಂಧನ

ಮಂಗಳೂರು: ನೇಪಾಳದಲ್ಲಿ ಕುಳಿತುಕೊಂಡು ಭಾರತೀಯರನ್ನು ಟಾರ್ಗೆಟ್ ಮಾಡಿ ಇನ್ವೆಸ್ಟ್‌ಮೆಂಟ್ ಫ್ರಾಡ್ ಮೂಲಕ ನೂರಾರು ಕೋಟಿ ರೂಪಾಯಿ ವಂಚನೆ ನಡೆಸುತ್ತಿದ್ದ ಅಂತರರಾಷ್ಟ್ರೀಯ ವಂಚಕರ ಗ್ಯಾಂಗ್‌ನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯವರು ಪತ್ತೆ ಹಚ್ಚಿ, ಒಟ್ಟು 11 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಬಂಧಿತ ಆರೋಪಿಗಳ ವಿವರ: ಗುಜರಾತ್ ನಿವಾಸಿ ಮಕವನ್ ವಿಕ್ರಂ (25),  ಕೊಲ್ಕೊತ್ತಾ ನಿವಾಸ ಿಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್ ನಿವಾಸಿ ಪುಪ್ಲ ಶಿವಕುಮಾರ್ ರಾವ್ (32), ರಾಜೇಶ್ ಮಂಡನ್ (30), ಮಿಥುನ್ ಕುಮಾರ್ ಮಂಗರಾಜ್ (38), ಉತ್ತರಪ್ರದೇಶ ನಿವಾಸಿ ಗೌರವ್ ಪಾಂಡೆ (24), ಹರ್ಷ್ ಮಿಶ್ರಾ (22),ಮೊಹಮ್ಮದ್ ಆಕೀಬ್ ಅಲಿ (27), ಬಿಹಾರ ನಿವಾಸಿ ರಾಜೀವ್ ರಂಜನ್ ಕುಮಾರ್ (30), ನೌಶಾದ್ ಅಲಿ (34) ರಾಜಸ್ಥಾನ ನಿವಾಸಿ ಓಂ ಪ್ರಕಾಶ್ ಯಾದವ್ (37) ಎಂದು ಗುರುತಿಸಲಾಗಿದೆ

ವಂಚಕರ ತಂಡದಲ್ಲಿ ಒಟ್ಟು 16 ಮಂದಿ ಭಾರತೀಯರು ಹಾಗೂ ಕೆಲ ಚೀನಾ ಮೂಲದ ವಂಚಕರು ಸೇರಿದ್ದು, ಚೀನಾದ ವಂಚಕರನ್ನು ನೇಪಾಳ ಪೊಲೀಸರು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಳಿದ ಐದು ಮಂದಿ ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳ ತಾಂತ್ರಿಕ ಪರಿಶೀಲನೆಯ ವೇಳೆ ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಪತ್ತೆಯಾಗಿವೆ. ಈ ಖಾತೆಗಳ ವಿರುದ್ಧ NCRP ಪೋರ್ಟಲ್‌ನಲ್ಲಿ 4,580ಕ್ಕೂ ಅಧಿಕ ದೂರುಗಳು ದಾಖಲಾಗಿದ್ದು, ಒಂದೇ ಒಂದು ಬ್ಯಾಂಕ್ ಖಾತೆಯಲ್ಲಿ ರೂ.167 ಕೋಟಿ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.

ಮಂಗಳೂರು ಸೆನ್ ಕ್ರೈಂ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಂಚಕರು ಬಳಸಿದ 10 ಬ್ಯಾಂಕ್ ಖಾತೆಗಳಲ್ಲಿ ಒಟ್ಟು ರೂ.30,70,26,725 ಹಣ ವರ್ಗಾವಣೆ ನಡೆದಿರುವುದು ದೃಢಪಟ್ಟಿದೆ. ಉಳಿದ 623 ಬ್ಯಾಂಕ್ ಖಾತೆಗಳ ಕುರಿತು ಇನ್ನೂ ವಿವರ ಸಂಗ್ರಹಿಸಲಾಗುತ್ತಿದೆ.

ಪ್ರಕರಣದ ಹಿನ್ನೆಲೆ

ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ.ಕ್ರ. 02/2026, ಐಟಿ ಕಾಯ್ದೆ ಕಲಂ 66(ಸಿ), 66(ಡಿ) ಹಾಗೂ ಬಿಎನ್‌ಎಸ್ ಕಲಂ 318(4), 308(5) ಅಡಿ ದಾಖಲಾಗಿರುವ ಪ್ರಕರಣದಲ್ಲಿ, ಆರೋಪಿಗಳು ಪಿರ್ಯಾದಿದಾರರಿಂದ ರೂ.1 ಕೋಟಿ 38 ಲಕ್ಷ ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದರು.

ತನಿಖೆ ಹಾಗೂ ತಾಂತ್ರಿಕ ವಿಶ್ಲೇಷಣೆಯ ಮೂಲಕ ವಂಚಕರು ನೇಪಾಳದಲ್ಲಿ ಕುಳಿತು ಈ ವಂಚನೆ ನಡೆಸುತ್ತಿದ್ದರೆಂಬುದು ಪತ್ತೆಯಾಗಿದ್ದು, ನಂತರ ಅಂತರರಾಷ್ಟ್ರೀಯ ಮಟ್ಟದ ಗ್ಯಾಂಗ್‌ನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

ವಂಚಕರ ಕಾರ್ಯವಿಧಾನ

ಒಂದು ತಂಡ ನೇಪಾಳದಲ್ಲಿ ನೆಲೆಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಖಾತೆದಾರರು ಹಾಗೂ ಏಜೆಂಟ್‌ಗಳನ್ನು ನೇಮಕ ಮಾಡಿಕೊಂಡು ವಂಚನೆಯ ಹಣವನ್ನು ಸಂಗ್ರಹಿಸಿ, ಅದನ್ನು USDT (ಕ್ರಿಪ್ಟೋ ಕರೆನ್ಸಿ) ರೂಪಕ್ಕೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸುತ್ತಿತ್ತು.

ಇನ್ನೊಂದು ತಂಡ ಕಾಂಬೋಡಿಯಾ, ದುಬೈ ಸೇರಿದಂತೆ ಇತರ ದೇಶಗಳಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕ ಹೂಡಿಕೆದಾರರನ್ನು ಸಂಪರ್ಕಿಸಿ, ಹೆಚ್ಚಿನ ಲಾಭಾಂಶದ ಆಮಿಷ ಒಡ್ಡುತ್ತಿತ್ತು. ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಮೂಲಕ ಸ್ಥಳೀಯ ಭಾಷೆಯಲ್ಲಿ ಹೂಡಿಕೆದಾರರನ್ನು ನಂಬಿಸಿ ಹಣ ವರ್ಗಾವಣೆ ಮಾಡಿಸಲಾಗುತ್ತಿತ್ತು. ಈ ಸಂಪೂರ್ಣ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡ ನಿಯಂತ್ರಿಸುತ್ತಿತ್ತು.

ಡಿಜಿಟಲ್ ಸ್ಲೇವರಿ ಬಗ್ಗೆ ಎಚ್ಚರಿಕೆ

ವಿದೇಶಗಳಲ್ಲಿ ಉತ್ತಮ ಉದ್ಯೋಗದ ಭರವಸೆ ನೀಡಿ ಯುವಕರನ್ನು ಟೂರಿಸ್ಟ್ ವೀಸಾದಲ್ಲಿ ಮಧ್ಯಪ್ರಾಚ್ಯ ಹಾಗೂ ಇತರ ದೇಶಗಳಿಗೆ ಕರೆಸಿಕೊಂಡು, ಅವರ ಪಾಸ್‌ಪೋರ್ಟ್ ಹಾಗೂ ದಾಖಲೆಗಳನ್ನು ಕಸಿದುಕೊಂಡು ಸೈಬರ್ ವಂಚನೆಗೆ ಬಳಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಆರು ಮಂದಿಯನ್ನು ಈ ರೀತಿಯ ಸೈಬರ್ ಸ್ಲೇವರಿಯಿಂದ ರಕ್ಷಿಸಲಾಗಿದ್ದು, ಸಂಬಂಧಪಟ್ಟಂತೆ ಪ್ರಕರಣಗಳು ದಾಖಲಾಗಿವೆ.

ಹಣ ಮರಳಿ ಸಿಗದಿರುವ ಪ್ರಮುಖ ಕಾರಣಗಳು

ವಂಚಕರು ಹಣವನ್ನು ತಕ್ಷಣವೇ USDTಗೆ ಪರಿವರ್ತಿಸಿ ವಿದೇಶಕ್ಕೆ ವರ್ಗಾವಣೆ ಮಾಡುವುದು

ವಂಚನೆ ನಡೆದ ದಿನವೇ ದೂರು ನೀಡಲು ವಿಳಂಬವಾಗುವುದು

ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ

ಕಮಿಷನ್ ಆಸೆಗೆ ಬ್ಯಾಂಕ್ ಖಾತೆಗಳನ್ನು ನೀಡಿದರೆ ಖಾತೆದಾರರೂ ಆರೋಪಿಗಳಾಗುತ್ತಾರೆ

ಹೆಚ್ಚಿನ ಲಾಭಾಂಶದ ಆಮಿಷಗಳಿಗೆ ಬಲಿಯಾಗಬೇಡಿ

SEBI ನೋಂದಾಯಿತ ಸಂಸ್ಥೆಗಳಲ್ಲಿಯೇ ಹೂಡಿಕೆ ಮಾಡಿರಿ

ವಂಚನೆ ನಡೆದ ಒಂದು ಗಂಟೆಯೊಳಗೆ 1930ಗೆ ಕರೆ ಮಾಡಿ ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ

ವಶಪಡಿಸಿಕೊಂಡ ಸೊತ್ತುಗಳು: ಲ್ಯಾಪ್‌ಟಾಪ್ – 1, ಮೊಬೈಲ್ ಫೋನ್‌ಗಳು – 21, ವಿವಿಧ ಕಂಪನಿಯ ಸಿಮ್ ಕಾರ್ಡ್‌ಗಳು – 20, ಬ್ಯಾಂಕ್ ಡೆಬಿಟ್ / ಕ್ರೆಡಿಟ್ ಕಾರ್ಡ್‌ಗಳು – 20


Spread the love