ಜ.17: ಶಿರೂರು ಪರ್ಯಾಯ ಪ್ರಯುಕ್ತ ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದಿಂದ ವಿವಿಧ ಕಾರ್ಯಕ್ರಮ
ಉಡುಪಿ: ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ವತಿಯಿಂದ ಶೀರೂರು ಪರ್ಯಾಯ ಮಹೋತ್ಸವದ ಪ್ರಯುಕ್ತ ಜನವರಿ 17 ರಂದು ಬೆಳಿಗ್ಗೆಯಿಂದ ರಾತ್ರಿಯ ತನಕ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷರಾದ ಯತೀಶ್ ಕರ್ಕೇರಾ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 9 ಗಂಟೆಗೆ ಕುಣಿತ ಭಜನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದ್ದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ವಿವಿಧ ತಾಲೂಕುಗಳಿಂದ ಭಜನಾ ತಂಡಗಳು ಕುಣಿತ ಭಜನೆಯನ್ನು ಪ್ರದರ್ಶಿಸಲಿದ್ದು, ಮಧ್ಯಾಹ್ನ 3 ಗಂಟೆಗೆ ರಾಜ್ಯ ಮಟ್ಟದ ಭಕ್ತಿ ಪ್ರಧಾನ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಿದ್ದು ಭಾಗವಹಿದ ತಂಡಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ರಾತ್ರಿ 7 ಗಂಟೆಗೆ ಉಡುಪಿ ಜಿಲ್ಲೆಯ ಪ್ರಸಿದ್ದ ಮೆಕ್ಕೆಕಟ್ಟೆ ಮೇಳದವರಿಂದ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಖ್ಯಾತ್ ಶೆಟ್ಟಿ, ಕೃಷ್ಣ ಶೆಟ್ಟಿ ಬಜಗೋಳಿ, ಮುರಳಿ ಶೆಟ್ಟಿ, ಅಕ್ಷತ್ ಪೈ, ಸುಧಾಕರ್, ಸೂರಜ್ ಕಲ್ಮಾಡಿ ಉಪಸ್ಥಿತರಿದ್ದರು.













