ಜ. 26-28: ದೊಡ್ಡಣಗುಡ್ಡೆ ರೈತ ಸೇವಾ ಕೇಂದ್ರದಲ್ಲಿ ಫಲಪುಷ್ಪ ಪ್ರದರ್ಶನ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ, ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಜನವರಿ 26 ರಿಂದ 28 ರವರೆಗೆ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ) ದ ಆವರಣ, ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕನವರ ವಿಷಯಾಧಾರಿತ 16ನೇ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ-2026 ನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಹೇಳಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫಲಪುಷ್ಪ ಪ್ರದರ್ಶನದ ಉದ್ಘಾಟನೆಯನ್ನು ಜನವರಿ 29 ರಂದು ಬೆಳಿಗ್ಗೆ 8:00 ಗಂಟೆಗೆ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್, ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರರವರು ನೆರವೇರಿಸಲಿದ್ದಾರೆ. ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಅಧ್ಯಕ್ಷತೆಯನ್ನು ವಹಿಸಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರು/ ಶಾಸಕರುಗಳು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಸುಮಾರು 7000 ಸಂಖ್ಯೆಯ 26 ಜಾತಿಯ ಹೂವಿನ ಗಿಡಗಳಾದ ಪೆಟೂನಿಯ, ಸೆಲೋಷಿಯಾ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಅಸ್ಟರ್, ಬಾಲ್ಸಮ್, ತೊರೇನಿಯ, ಗುಲಾಬಿ, ಟೆಕೋಮಾ, ದಾಸವಾಳ, ಪ್ಯಾನ್ಸಿ, ಇಂಪೇಷಿಯನ್ಸ್ ಹಾಗೂ ಮುಂತಾದ ಗಿಡಗಳನ್ನು ಜೋಡಿಸಲಾಗುವುದು.
ಈ ವರ್ಷದ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು:
1. ಸಾಲುಮರದ ತಿಮ್ಮಕ್ಕನವರ ಜೀವನ ಮತ್ತು ಸಾಧನೆಗಳ ಬಗ್ಗೆ ಕಲಾ ಕೃತಿಗಳ ಪ್ರದರ್ಶನ
2. ಫಲಪುಷ್ಪ ಪ್ರದರ್ಶನದಲ್ಲಿ ಗುಲಾಬಿ, ಸೇವಂತಿಗೆ ಹಾಗೂ ಮುಂತಾದ ಹೂವುಗಳನ್ನು ಬಳಸಿ ವಿವಿಧ ಕಲಾಕೃತಿಗಳನ್ನು ತಯಾರಿಸಲಾಗುವುದು.
3. ತೆಂಗಿನ ಗರಿಗಳಿಂದ ಜಾನೂರ್ ಆರ್ಟ್ ಕಲಾಕೃತಿಗಳು
4. ಹೂವುಗಳಿಂದ ತಯಾರಿಸಿದ Selfy Zone, Doreman and Mushroom, Cone ಮಾದರಿಗಳು
5. ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ಹೂವಿನ ಕುಂಡಗಳ ಜೋಡಣೆ ಏರ್ಪಡಿಸಲಾಗುವುದು
6. ವಿವಿಧ ತರಕಾರಿಗಳ ಮಾದರಿ ಕೈತೋಟ ಹಾಗೂ Micro-greens ಬಗ್ಗೆ ಪ್ರಾತ್ಯಕ್ಷತೆ
7. ಫಲಪುಷ್ಟ ಪ್ರದರ್ಶನದಲ್ಲಿ ದಿ: 26-01-2026 ರಂದು ಅಡಿಕೆ ಎಲೆ ಚುಕ್ಕೆ ರೋಗದ ನಿಯಂತ್ರಣ ಕುರಿತು, ದಿ: 27-01-2026 ರಂದು ಉಡುಪಿ ಜಿಲ್ಲೆಯ ಭೌಗೋಳಿಕ ಗುರುತಿಸುವಿಕೆ ಬೆಳೆಗಳಾದ ಉಡುಪಿ ಮಲ್ಲಿಗೆ ಹಾಗೂ ಮಟ್ಟು ಗುಳ್ಳ ಬದನೆ ಬೆಳೆಗಳಿಗೆ ಇರುವ ರಫ್ತು ಅವಕಾಶಗಳ ಕುರಿತು ಹಾಗೂ ದಿ: 28-01-2026 ಕೈತೋಟ ಮತ್ತು ತಾರಸಿ ತೋಟ ನಿರ್ಮಾಣ ಹಾಗೂ ನಿರ್ವಹಣೆ ವಿಚಾರ ಸಂಕೀರ್ಣವನ್ನು ಏರ್ಪಡಿಸಿದೆ
8. ಕೃಷಿ ಸಂಬಂದಿತ ಇಲಾಖೆಗಳಾದ ಕೃಷಿ, ಮೀನುಗಾರಿಕೆ, ಜಿಲ್ಲಾ ಪಂಚಾಯತ್ನ DAY-NRLM ಸಂಘ, ಪಶುಸಂಗೋಪನೆ, ಕೃಷಿ ವಿಜ್ಞಾನ ಕೇಂದ್ರ, ಬ್ಯಾಂಕ್ ಹಾಗೂ ಇತರೆ ಇಲಾಖೆಗಳಿಂದ ವಸ್ತು ಪ್ರದರ್ಶನ/ ಇಲಾಖಾ ಯೋಜನೆಗಳ ಮಾಹಿತಿ ಮಳಿಗೆಗಳನ್ನು ತೆರೆಯಲಾಗುವುದು.
9. ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಯನ್ನು ತೆರೆಯಲಾಗುವುದು.
10. ರೈತರು ಬೆಳೆದಿರುವಂತಹ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರು ಬೆಳೆಗಳ ಪ್ರದರ್ಶಿಕೆಯನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಆಸಕ್ತರು ಜನವರಿ 25ರಂದು ಸಂಜೆ 3:00 ಗಂಟೆಗೆ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣ, ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ, ದೊಡ್ಡಣಗುಡ್ಡೆ ಇಲ್ಲಿ ಪ್ರದರ್ಶಿಕೆಗಳನ್ನು ತಂದು ಹೆಸರನ್ನು ನೊಂದಾಯಿಸಿಕೊಳ್ಳುವುದು
ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬೆಳಿಗ್ಗೆ 10:00 ರಿಂದ ಸಾಯಂಕಾಲ 8:00 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಉಡುಪಿ ಜಿಲ್ಲೆಯ ರೈತರು, ಸಾರ್ವಜನಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.













