ಕಾರ್ಕಳ: ಅಕ್ರಮ ಸ್ಪೋಟಕ ಬಳಸಿ ಕಲ್ಲು ಬಂಡೆ ಒಡೆದ ತಂದೆ- ಮಗನ ಬಂಧನ
ಕಾರ್ಕಳ: ಯಾವುದೇ ಪರವಾನಗಿ ಹೊಂದದೆ ಅಕ್ರಮವಾಗಿ ಸ್ಪೋಟಕವನ್ನು ಬಳಸಿ ಕಲ್ಲು ಬಂಡೆಗಳನ್ನು ಒಡೆದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ನಗರ ಪೊಲೀಸರು ತಂದೆ–ಮಗನನ್ನು ಬಂಧಿಸಿದ್ದಾರೆ.
ಜನವರಿ 21 ರಂದು ಸಂಜೆ ಸುಮಾರು 5 ಗಂಟೆಗೆ, ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಪ್ರದೇಶದಲ್ಲಿ ರವಿಚಂದ್ರ ಹಾಗೂ ಪವನ್ ಎಂಬವರು ಪರವಾನಗಿ ಇಲ್ಲದೇ ಸ್ಪೋಟಕ ಬಳಸಿ ಕಲ್ಲು ಬಂಡೆಗಳನ್ನು ಒಡೆದಿರುವುದಾಗಿ ಆರೋಪಿಸಲಾಗಿದೆ. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 13/2026ರಂತೆ Explosive Act–1884ರ ಕಲಂ 9(B)1(b), Explosive Substance Act–1908ರ ಕಲಂ 5, ಐಪಿಸಿ ಕಲಂ 287 ಹಾಗೂ ಬಿಎನ್ಎಸ್–2023ರ ಕಲಂ 3(5) ಅಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಗಳು ಆರೋಪಿತರಾದ ಕುಕ್ಕುಂದೂರು ಅಯ್ಯಪ್ಪ ನಗರ ನಿವಾಸಿ ಟಿ. ರವಿಚಂದ್ರ (55), ಮತ್ತು ಆತನ ಪುತ್ರ ಪವನ್ ಕುಮಾರ್ (31) ಇವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.












