ಕಾರ್ಕಳ: ಸಾಣೂರು ಸೇಣರಬೆಟ್ಟು ಕೋಟಿಚೆನ್ನಯ ಜೋಡುಕರೆ ಕಂಬಳ- ನೂತನ ಕಂಬಳ ಕರೆಗೆ ಭೂಮಿಪೂಜೆ
ಕಾರ್ಕಳ: ತಾಲೂಕಿನ ಸಾಣೂರು ಸೇಣರಬೆಟ್ಟು ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿಯ ಆಶ್ರಯದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ “ಕೋಟಿಚೆನ್ನಯ ಜೋಡುಕರೆ ಕಂಬಳ”ದ ನೂತನ ಕಂಬಳ ಕರೆ ನಿರ್ಮಾಣದ ಭೂಮಿಪೂಜೆ ಗುರುವಾರ ಸಾಣೂರು ಸೇಣರಬೆಟ್ಟು ಎಂಬಲ್ಲಿ ನಡೆಯಿತು.

ಸಾಣೂರು ಸೇಣರಬೆಟ್ಟು ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಜಗದೀಶ್ ಪೂಜಾರಿ ಹಾಗೂ ಗೌರವಾಧ್ಯಕ್ಷ ಅಶೋಕ್ ಕೋಟ್ಯಾನ್ ಕೊಳಕೆ ಇರ್ವತ್ತೂರು ಅವರು ನೂತನ ಕಂಬಳ ಕರೆಯ ಶಂಕುಸ್ಥಾಪನೆ ನೇರವೇರಿಸಿದರು. ಪುರೋಹಿತರಾದ ಶ್ರೀರಾಮ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಆ ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು, ಜಗದೀಶ್ ಪೂಜಾರಿ ಅವರು ಸಾಣೂರಿನಲ್ಲಿ ಕಂಬಳ ನಡೆಸಬೇಕೆಂದು ಹಲವು ದಿನಗಳಿಂದ ಇಂಗಿತ ವ್ಯಕ್ತಪಡಿಸುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಅಶೋಕ್ ಕೋಟ್ಯಾನ್ ಅವರ ಸಹಕಾರದೊಂದಿಗೆ ಜಗದೀಶ್ ಪೂಜಾರಿ ಅವರು ನಡೆಸಲು ಹೊರಟಿರುವ ಈ ಕಂಬಳವು ಅತ್ಯಂತ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.
ಕಾರ್ಕಳ ತಾಲೂಕಿನಲ್ಲಿ ಐತಿಹಾಸಿಕ ಮಿಯ್ಯಾರು ಕಂಬಳ ಹಾಗೂ ಬಾರಾಡಿಬೀಡು ಕಂಬಳವು ಕಳೆದ ಮೂರ್ನಾಲ್ಕು ದಶಕಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಇದೀಗ ಅದಕ್ಕೆ ಸಾಣೂರು ಕಂಬಳ ಸೇರ್ಪಡೆಯಾಗಿದೆ. 5 ಕಿ.ಮೀ ಅಂತರದಲ್ಲಿ ಮೂರು ಕಂಬಳಗಳು ನಡೆಯುತ್ತಿರುವುದು ಕಾರ್ಕಳಕ್ಕೆ ಹೆಮ್ಮೆಯ ಸಂಗತಿ. ಕಂಬಳಕ್ಕೆ ಈ ವರ್ಷದಿಂದ ಸರಕಾರ 5 ಲಕ್ಷ ರೂ. ಅನುದಾನ ನೀಡಬೇಕೆಂದು ನಮ್ಮೆಲ್ಲರ ಆಗ್ರಹವಿದೆ. ಕಂಬಳದ ಸಂಖ್ಯೆ ಹೆಚ್ಚಾದ್ದಂತೆ ಕಂಬಳಕ್ಕೆ ನೀಡುವ ಅನುದಾನವನ್ನು ಹೆಚ್ಚಳ ಮಾಡಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.
ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಕಾಂಗ್ರೆಸ್ ಮುಖಂಡ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಕಂಬಳ ಮುಖಂಡರಾದ ಗುಣಪಾಲ ಕಡಂಬ, ಉದಯ ಕೋಟ್ಯಾನ್, ಸುರೇಶ್ ಶೆಟ್ಟಿ, ರಂಜಿತ್ ಪೂಜಾರಿ, ಭಾಸ್ಕರ್ ಕೋಟ್ಯಾನ್, , ಪ್ರಭಾಕರ ನಾಯಕ್, ರಮೇಶ್ ಶೆಟ್ಟಿ, ವಿಜಯ ಕುಮಾರ್ ಕಂಗಿನಮನೆ, ಕಡ್ತಲ ವಿಶ್ವನಾಥ ಪೂಜಾರಿ, ಸುವೃತ್ ಜೈನ್, ಅವಿಲ್ ಮೆನೇಜಸ್, ತಾರಾನಾಥ್ ಕೋಟ್ಯಾನ್, ಎರ್ಮಾಳು ರೋಹಿತ್ ಹೆಗ್ಡೆ, ಸಾಣೂರು ಸುಂದರ್ ಕೆ. ಆಚಾರ್ಯ, ಸುಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.












