ಸಂಸದರು ವಾರಾಹಿ ನೀರಾವರಿ ಯೋಜನೆಯ ವಾಸ್ತವ ಅರಿತು ಮಾತನಾಡಲಿ : ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಸಿದ್ಧಾಪುರ ಗ್ರಾಮದ ಹೋರಿಯಬ್ಬೆಯಲ್ಲಿನ ವರಾಹಿ ಡೈವರ್ಶನ್ ವೀಯರ್ ಬಗ್ಗೆ ವಾಸ್ತವದ ಅರಿವಿಲ್ಲದೆ ಜನರನ್ನು ಮತ್ತು ಸರ್ಕಾರವನ್ನು ದಾರಿತಪ್ಪಿಸುತ್ತಿರುವ ಸಂಸದ ಬಿ. ವೈ. ರಾಘವೇಂದ್ರ ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಣಿ ಜಲಾಶಯದಿಂದ ಹೊರಬಂದ ನೀರು ವರಾಹಿ ನದಿ ಮೂಲಕ ಸಿದ್ಧಾಪುರ ಗ್ರಾಮದ ಹೋರಿಯಬ್ಬೆಯಲ್ಲಿ ಶೇಖರಣೆಯಾಗುತ್ತದೆ. ಈ ಡೈವರ್ಶನ್ ವಿಯರ್ 1100 ಕ್ಯೂಸೆಕ್ಸ್ ನೀರು ಸಂಗ್ರಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಡೈವರ್ಶನ್ ವಿಯರ್ ನಿರ್ಮಾಣವಾಗಿರುವುದು ಕೇವಲ ವರಾಹಿ ನೀರಾವರಿ ಯೋಜನೆಯ ಎಡ ದಂಡೆ, ಬಲ ದಂಡೆ ಮತ್ತು ಏತ ನೀರಾವರಿಯ ಕಾಲುವೆಗಳಿಗೆ ನೀರುಣಿಸಲು, ಉಳಿದ ಎಲ್ಲಾ ಇತರೇ ಯೋಜನೆಗಳಿಗೆ ವರಾಹಿ ನದಿಯಿಂದಲೇ ನೀರನ್ನು ಎತ್ತಬೇಕು. ಆದರೆ ರೈತರ ಜೀವನಾಡಿಯಾದ ವರಾಹಿ ಡೈವರ್ಶನ್ ವಿಯರ್ ನಿಂದಲೇ ಸಿದ್ಧಾಪುರ ಏತ ನೀರಾವರಿ ಯೋಜನೆಗೆ ನೀರನ್ನು ಎತ್ತ ಬೇಕು ಎನ್ನುವ ಸಂಸದರ ಒತ್ತಾಯ ವರಾಹಿ ನದಿ ಪಾತ್ರದ ರೈತರ ಹಾಗೂ ವರಾಹಿ ನದಿ ನೀರನ್ನೇ ನಂಬಿ ಬದುಕುತ್ತಿರುವ ಕುಂದಾಪುರ ಪುರಸಭೆ ಹಾಗೂ ಸುಮಾರು ಹನ್ನೆರಡು ಗ್ರಾಮ ಪಂಚಾಯತುಗಳ ಜನಸಾಮಾನ್ಯರಿಗೆ ಮಾಡುತ್ತಿರುವ ದ್ರೋಹವಾಗಿದೆ.
ಸಂಸದರು ಹೇಳಿದಂತೆ ವರಾಹಿ ಡೈವರ್ಶನ್ ವಿಯರ್ ಪಕ್ಕದಲ್ಲೇ ಸಿದ್ಧಾಪುರ ಏತ ನೀರಾವರಿ ಯೋಜನೆಯ ಜಾಕ್ ವೆಲ್ ನಿರ್ಮಾಣವಾದರೆ ಡೈವರ್ಶನ್ ವಿಯರ್ ಗೆ ಅಪಾಯ ಕಟ್ಟಿಟ್ಟಬುತ್ತಿ. ಕುಂದಾಪುರ ತಾಲ್ಲೂಕು ರೈತ ಸಂಘ ಸಿದ್ಧಾಪುರ ಏತ ನೀರಾವರಿ ಯೋಜನೆ ಆದಷ್ಟು ಬೇಗ ಜಾರಿಯಾಗಲಿ ಎಂದು ಆಶಿಸುತ್ತದೆ ಆದರೆ ಈ ಯೋಜನೆಯ ಜಾಕ್ ವೆಲ್ ಮಾತ್ರ ವರಾಹಿ ನದಿ ಪಕ್ಕದಲ್ಲೇ ನಿರ್ಮಾಣವಾಗಬೇಕು ಇಲ್ಲದೆ ಇದ್ದರೆ ವರಾಹಿ ನದಿ ಪಾತ್ರದ ರೈತರು ಹಾಗೂ ಕುಡಿಯುವ ನೀರು ಬಳಕೆದಾರರನ್ನು ಸೇರಿಸಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ.













