ಶೀರೂರು ಶ್ರೀ ಪ್ರಥಮ ಸರ್ವಜ್ಞ ಪೀಠಾರೋಹಣ ಸಫಲರಾಗಿಸೋಣ: ಶಾಸಕ ಯಶಪಾಲ್ ಸುವರ್ಣ
ಮುಂಬಯಿ: ಉಡುಪಿ ಪರ್ಯಾಯ ವಿಶ್ವಕ್ಕೆ ಪ್ರಸಿದ್ಧವಾಗಿದೆ. ಈ ಬಾರಿಯ ಈ ಆಚರಣೆ ಸಾಮಾಜಿಕ,ಸಾಂಸ್ಕೃತಿಕ ಮೇಲೈಕೆಯೊಂದಿಗೆ ನೆರವೇರಲಿದ್ದು ಇದು ಉಡುಪಿ ಭಕ್ತರ ಪರ್ಯಾಯವಾಗಲಿದೆ. ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಶ್ರೀ ವಾಮನ ತೀರ್ಥ ಪರಂಪರೆಯ ಉಡುಪಿ ಶೀರೂರು ಪೀಠಾಧೀಶ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಸರ್ವಜ್ಞ ಪೀಠಾರೋಹಣವನ್ನು (ಪರ್ಯಾಯ) ಭಕ್ತರೆಲ್ಲರೂ ಸ್ಪಂದಿಸಿ ಸಫಲರಾಗಿಸೋಣ ಎಂದು ಉಡುಪಿ ಶಾಸಕ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಯಶಪಾಲ್ ಎ.ಸುವರ್ಣ ತಿಳಿಸಿದರು.

ಮಂಗಳವಾರ ಸಂಜೆ ಮಲಾಡ್ ಪಶ್ಚಿಮದ ಎವರ್ಶೈನ್ ನಗರದಲ್ಲಿನ ಹೋಟೆಲ್ ಸಾಯಿ ಪ್ಯಾಲೇಸ್ ಗ್ಯಾಂಡ್ನ ಸಭಾಗೃಹದಲ್ಲಿ ಪರ್ಯಾಯ ಸ್ವಾಗತ ಸಮಿತಿಯು ಮುಂಬಯಿ ಮಹಾನಗರದಲ್ಲಿನ ಭಕ್ತರೊಂದಿಗೆ ಆಯೋಜಿಸಲಾಗಿದ್ದ ಸಭಾಧ್ಯಕ್ಷತೆ ವಹಿಸಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿದರು.
ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಬೋಜ ಶೆಟ್ಟಿ, ಬೊಂಬೇ ಬಂಟ್ಸ್ ಅಸೋಸಿಯೇಶನ್ ನಿಕಟಪೂರ್ವ ಅಧ್ಯಕ್ಷ ಸಿಎಂ ಸುರೇಂದ್ರ ಕೆ.ಶೆಟ್ಟಿ, ರವಿ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್), ಎರ್ಮಾಳ್ ಹರೀಶ್ ಶೆಟ್ಟಿ, ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ಡಾ| ಎಂ.ನರೇಂದ್ರ ವೇದಿಕೆಯಲ್ಲಿದ್ದು ಬೃಹನ್ಮುಂಬಯಿಯಲ್ಲಿನ ಹಿರಿಯ ಮತ್ತು ಪ್ರತಿಷ್ಠಿತ ಉದ್ಯಮಿ ಕೃಷ್ಣ ವೈ.ಶೆಟ್ಟಿ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯಿತ್ತರು.
ಕೃಷ್ಣಕ್ಯ ಶೀರೂರು ಲಕ್ಷ್ಮಿ ವರತೀರ್ಥರನ್ನು ಸ್ಮರಿಸಿದ ಶಾಸಕ ಯಶಪಾಲ್, ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿರುವ ಶ್ರೀ ವಾಮನತೀರ್ಥ ಪರಂಪರೆಯ ಮೂಲ ಮಹಾಸಂಸ್ಥಾನಮ್ ಶ್ರೀ ಶೀರೂರು ಮಠದ ಶೀರೂರು ಪರ್ಯಾಯ 2026-2028ವನ್ನು ಆಧ್ಯಾತ್ಮಿಕ ಮತ್ತು ಸಾಮಾಜಿಕವಾಗಿ ಯಶಸ್ವಿಗೊಳಿಸುವ ಭಾಗ್ಯವನ್ನು ಮಠದ ಅಭಿಮಾನಿಗಳೂ, ಶ್ರೀಕೃಷ್ಣನ ಭಕ್ತಾಧಿಗಳಾದ ನಮ್ಮೆಲ್ಲರ ಪಾಲಿಗೆ ಶ್ರೀಕೃಷ್ಣ ದೇವರು ಪ್ರಾಪ್ತಿಸಿದ್ದು ಇದನ್ನು ಐಕ್ಯತೆಯಿಂದ ಸಫಲತೆಗೊಳಿಸೋಣ ಎಂದು ಕರೆಯಿತ್ತರು.

ಮಹೇಶ್ ಆರ್.ಶೆಟ್ಟಿ ತೆಳ್ಳಾರ್, ಪ್ರವೀಣ್ ಬೋಜ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ಡಾ| ಎಂ.ನರೇಂದ್ರ, ಸಿಎ। ಸುರೇಂದ್ರ ಕೆ.ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಶೀರೂರು ವೇದವರ್ಧನತೀರ್ಥರ ಪರ್ಯಾಯೋತ್ಸವ ಇತಿಹಾಸ ಪ್ರಸಿದ್ಧವಾಗಿ ನೆರವೇರಲಿ. ನಾವೆಲ್ಲರೂ ದೇಣಿಗೆ ಜೊತೆಗೆ ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರಮಿಸೋಣ ಎಂದು ಶುಭಕೋರಿದರು.
ಪರ್ಯಾಯ ಸ್ವಾಗತ ಸಮಿತಿ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಪ್ರಸ್ತಾವನೆಗೈದು ಉಡುಪಿಯ ಶ್ರೀಕೃಷ್ಣನ ಆವಾಸಸ್ಥಾನದಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ ಮತ್ತೊಮ್ಮೆ ನಡೆಯಲಿದ್ದು, ‘ಶೀರೂರುಶ್ರೀ ವೇದವರ್ಧನತೀರ್ಥ ಶ್ರೀಪಾದರು ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದು, ಮುಂದಿನ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಆರಾಧನೆಯಲ್ಲಿ ನಿರತರಾಗುವ ಶುಭಾವಸರದಿ ನಮ್ಮೆಲ್ಲರ ಸೇವೆಯು ಅತ್ಯವಶ್ಯಕವಾಗಿದೆ. ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಕರಾರ್ಚಿತ ಶ್ರೀಮಠದ ಪಟ್ಟದ ದೇವರಾದ ಶ್ರೀ ರುಕ್ಕಿಣಿ ಸತ್ಯಭಾಮಾ ಸಹಿತ ಪಾಂಡುರಂಗ ವಿಠಲ ದೇವರನ್ನು ಮುಂದಿರಿಸಿಕೊಂಡು ಉಡುಪಿ ಕ್ಷೇತ್ರದ ಸರ್ವ ದೇವರ ದರ್ಶನ ಪೂರ್ವಕವಾಗಿಸಿದ ಶ್ರೀಗಳು ಇದೀಗಲೇ ಪರ್ಯಾಯ ನಿಮಿತ್ತ ಪೂರ್ವಭಾವಿಯಾಗಿಸಿ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ರಜತಪೀಠಪುರದ ಪುರಪ್ರವೇಶಗೈದಿದ್ದಾರೆ. ಶೀಘ್ರದಲ್ಲೇ ಪರ್ಯಾಯ ದೀಕ್ಷೆ ಸ್ವೀಕರಿಸುವ ಯತಿವರ್ಯರ ಪೀಠಾರೋಹಣಕ್ಕೆ ನಾವೆಲ್ಲರೂ ಸೇವಾರ್ಥಿಗಳಾಗಿ ಸ್ಪಂದಿಸಿ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗೋಣ. ಇದೀಗಲೇ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಭಕ್ತಾಭಿಮಾನಿಗಳು ಹಾಗೂ ಶಿಷ್ಯವರ್ಗವನ್ನೊಳಗೊಂಡು ಪ್ರಥಮ ಬಾರಿಗೆ ಪರ್ಯಾಯ ಪೀಠವನ್ನೇರಲಿರುವ ಪೂಜ್ಯರಿಗೆ ನಮ್ಮ ಸಹಯೋವನ್ನೀಡೋಣ ಎಂದರು.
ಸಭೆಯಲ್ಲಿ ಪರ್ಯಾಯ ಹೊರೆಕಾಣಿಕೆ ಸಮಿತಿ ಸಹ ಸಂಚಾಲಕ ಶರತ್ ಹೆಗ್ಡೆ ಪಂಜಾಳ (ರೆಂಜಾಳ), ಕುಪ್ಪೆಟ್ಟು ಪ್ರವೀಣ್ ಕುಮಾರ್ ಹೆಗ್ಡೆ, ಬೆಳ್ಳಣ್ಣು ಶರತ್ ಹೆಗ್ಡೆ, ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ಪಿ.ಧನಂಜಯ ಶೆಟ್ಟಿ, ಸಿಎ! ಸುಧೀರ್ ಆರ್.ಎಲ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ, ಕೆ.ಪ್ರೇಮನಾಥ್ ಶೆಟ್ಟಿ, ರಮೇಶ್ ಶೆಟ್ಟಿ (ಮೋಡರ್ನ್), ಮನೋಹರ್ ತೋನ್ಸೆ, ಪ್ರಕಾಶ್ ಶೆಟ್ಟಿ ಬೋರಿವಿಲಿ, ಕಿಶನ್ ಶೆಟ್ಟಿ ಮತ್ತಿತರ ಗಣ್ಯರು, ಭಕ್ತಾಭಿಮಾನಿಗಳು ಹಾಜರಿದ್ದು ಪರ್ಯಾಯ ಮಹೋತ್ಸವದ ಯಶಸ್ಸಿಗೆ ಹಾರೈಸಿದರು.
ಶಾಸಕ ಯಶಪಾಲ್ ಸುವರ್ಣ ಆಮಂತ್ರಣ ಪತ್ರಿಕೆ ನೀಡಿ ಸೇವಾರ್ಥಿಗಳಿಗೆ ಆಹ್ವಾನಿಸಿದರು. ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿ ಗಣ್ಯರನ್ನು ಪರಿಚಯಿಸಿ ಸಭಾ ಕಲಾಪ ನಿರೂಪಿಸಿ ವಂದನಾರ್ಪಣೆಗೈದರು












