ಮಂಗಳೂರು | ಖಾಸಗಿ ವೀಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್: ಉದ್ಯೋಗಿಯ ಬಂಧನ
ಮಂಗಳೂರು: ಖಾಸಗಿ ವೀಡಿಯೋಗಳನ್ನು ಬಳಸಿಕೊಂಡು ಸಂಸ್ಥೆಯ ಮಾಲೀಕರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಉದ್ಯೋಗಿಯನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಡುಪಿಯ ಕಾಪು ಮೂಲದ ಅಭಿಷೇಕ್ ಸುರೇಂದ್ರ ಪೂಜಾರಿ ಎಂದು ಗುರುತಿಸಲಾಗಿದೆ.
ಎರಡು ವರ್ಷಗಳ ಹಿಂದೆ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್, ಸಂಸ್ಥೆಯ ಮಾಲೀಕರಿಗೆ ದುಬೈನಲ್ಲಿ ತರಬೇತಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ನಂಬಿಸಿ ಅಲ್ಲಿಗೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಆದರೆ ಅಲ್ಲಿಗೆ ತೆರಳಿದ ಬಳಿಕ ಅಂತಹ ಯಾವುದೇ ಅವಕಾಶವಿಲ್ಲವೆಂಬುದು ತಿಳಿದುಬಂದಿದೆ ಎಂದು ತಿಳಿದುಬಂದಿದೆ.
ದುಬೈನಲ್ಲಿ ಇದ್ದ ಸಂದರ್ಭದಲ್ಲಿ ಮಾಲೀಕರ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡಿರುವ ಆರೋಪಿಯು, ಮಂಗಳೂರಿಗೆ ಮರಳಿದ ಬಳಿಕ ಆ ವೀಡಿಯೋಗಳನ್ನು ಮುಂದಿಟ್ಟು ಬೆದರಿಕೆ ಹಾಕಲು ಆರಂಭಿಸಿದ್ದಾನೆ. ವೀಡಿಯೋಗಳನ್ನು ಅಳಿಸಬೇಕಾದರೆ 2 ಕೋಟಿ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಾನೆ. ಈ ಹಣವನ್ನು ತನ್ನ ಪತ್ನಿ ಶ್ರೀನಿಧಿ ಪಟ್ಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಕೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ನೀಡದಿದ್ದ ಹಿನ್ನೆಲೆಯಲ್ಲಿ, ಆರೋಪಿಯು ವೀಡಿಯೋಗಳನ್ನು ಕತ್ತರಿಸಿ ಮಾರ್ಫ್ ಮಾಡಿ ಮಂಗಳೂರು ಹಾಗೂ ಉಡುಪಿಯ ಕೆಲವು ಪ್ರತಿಷ್ಠಿತ ಕಾಲೇಜುಗಳ ಪ್ರಾಂಶುಪಾಲರಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾನೆ ಎನ್ನಲಾಗಿದೆ.
ಬ್ಲ್ಯಾಕ್‌ಮೇಲ್‌ಗೆ ಒಳಗಾದ ಮಾಲೀಕರ ಪುತ್ರಿ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪತ್ನಿಯ ಪಾತ್ರದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.













