ಮಂಗಳೂರು| ಜಾತಿ ನಿಂದನೆ : ಎರಡು ಪ್ರಕರಣಗಳಲ್ಲಿ ಆರೋಪಿಗಳಿಗೆ ಜೈಲುಶಿಕ್ಷೆ, ದಂಡ
ಮಂಗಳೂರು : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಎರಡೂ ಪ್ರಕರಣದಲ್ಲಿ ಸರಕಾರದ ಪರವಾಗಿ ಅಭಿಯೋಜಕಿ ಜ್ಯೋತಿ ನಾಯ್ಕ ವಾದಿಸಿದ್ದರು.
*ಪ್ರಕರಣ 1: 2019ರ ಮೇ 6ರಂದು ಪರಿಶಿಷ್ಠ ಜಾತಿಗೆ ಸೇರಿದ ವ್ಯಕ್ತಿಯೊಬ್ಬರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾತಿನಿಂದನೆ ಮಾಡಿ, ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿದಂತೆ ಆರೋಪಿ ನಾರಾಯಣ ಗೌಡ ಎಂಬಾತನಿಗೆ ಕಲಂ 447, 324 ಮತ್ತು 504 ಅನ್ವಯ ಶಿಕ್ಷೆ ಪ್ರಕಟಿಸಿ 500, 10,000 ಮತ್ತು 10,000 ರೂ.ದಂಡ ಪಾವತಿಸಲು ಆದೇಶಿಸಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದಲ್ಲಿ ಕ್ರಮವಾಗಿ 3 ತಿಂಗಳು, 6 ತಿಂಗಳು ಮತ್ತು 6 ತಿಂಗಳ ಶಿಕ್ಷೆ ವಿಧಿಸಿದೆ.
*ಪ್ರಕರಣ 2: 2022ರ ಅಕ್ಟೋಬರ್ 7ರಂದು ಪರಿಶಿಷ್ಟ ಜಾತಿಗೆ ಸೇರಿದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಸ್ಮಾನ್ ಎಂಬಾತನಿಗೆ ನ್ಯಾಯಾಲಯವು ಐಪಿಸಿ ಕಲಂ 354, 506 ಮತ್ತು ಎಸ್ಸಿ-ಎಸ್ಟಿ 3(1)ಡಬ್ಲ್ಯು, 3(2)(ವಿಎ), ಕಾಯ್ದೆಯಡಿ 1 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.
ದಂಡ ತೆರಲು ವಿಫಲವಾದರೆ ಹೆಚ್ಚುವರಿಯಾಗಿ 6 ತಿಂಗಳು ಶಿಕ್ಷೆ ವಿಧಿಸಿದೆ. ಐಪಿಸಿ 506ರ ಅನ್ವಯ 6 ತಿಂಗಳು ಜೈಲು ಶಿಕ್ಷೆ 5 ಸಾವಿರ ರೂ.ದ.ಡ ವಿಧಿಸಿದೆ. ಈ ದಂಡ ತೆರಲು ವಿಫಲವಾದರೆ ಹೆಚ್ಚುವರಿಯಾಗಿ 15 ದಿನಗಳ ಜೈಲು ಶಿಕ್ಷೆ ಅನುಭವಿಸಲು ಆದೇಶಿಸಿದೆ.













