ಮಂಗಳೂರು | ಸಹಾಯಕ ಔಷಧ ನಿಯಂತ್ರಕ ಮನೆ-ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ, ₹3.37 ಕೋಟಿ ಮೌಲ್ಯದ ಆಸ್ತಿ ಪತ್ತೆ

Spread the love

ಮಂಗಳೂರು | ಸಹಾಯಕ ಔಷಧ ನಿಯಂತ್ರಕ ಮನೆ-ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ, ₹3.37 ಕೋಟಿ ಮೌಲ್ಯದ ಆಸ್ತಿ ಪತ್ತೆ

ಮಂಗಳೂರು: ನ್ಯಾಯಬದ್ದ ಆದಾಯಕ್ಕಿಂತ ಹೆಚ್ಚಿನ ಅಸಮತೋಲನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಮಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಸಹಾಯಕ ಔಷಧ ನಿಯಂತ್ರಕನ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಮಂಗಳೂರು ವ್ಯಾಪ್ತಿಯ ಪ್ರಾದೇಶಿಕ ಉಪ ಔಷಧ ನಿಯಂತ್ರಕರ ಕಚೇರಿಯಲ್ಲಿ ಸಹಾಯಕ ಔಷಧ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಾಬು ಬಿ.ಎನ್ (ತಂದೆ: ದಿ. ನಂಜುಂಡಪ್ಪ ಎನ್) ವಿರುದ್ಧ ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಕೆ.ಎನ್ ನೀಡಿದ ಮೂಲ ವರದಿ ಆಧಾರದ ಮೇಲೆ ದಿನಾಂಕ 06.04.2026 ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆಯ ಅಂಗವಾಗಿ ದಿನಾಂಕ 07.04.2026 ರಂದು ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಆರು ಲೋಕಾಯುಕ್ತ ಪೊಲೀಸ್ ತಂಡಗಳು ದಾಳಿ ನಡೆಸಿದವು.

ದಾಳಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿರುವ ವಾಸದ ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳು, ಬೆಂಗಳೂರು ನಗರದಲ್ಲಿನ ಫ್ಲಾಟ್ ಹಾಗೂ ವಾಸದ ಮನೆಗಳು, ಮಂಗಳೂರಿನಲ್ಲಿರುವ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಯಿತು.

ಈ ವೇಳೆ ಬಾಬು ಬಿ.ಎನ್ ಅವರಿಗೆ ಸಂಬಂಧಿಸಿದಂತೆ ಒಟ್ಟು ₹3,37,04,000 ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳು ಪತ್ತೆಯಾಗಿವೆ. ಬೆಂಗಳೂರಿನ ವಾಸದ ಮನೆಯಲ್ಲಿ ₹23.54 ಲಕ್ಷ ನಗದು ಹಾಗೂ ಚಿನ್ನ-ಬೆಳ್ಳಿ ಆಭರಣಗಳು ಕೂಡ ಪತ್ತೆಯಾಗಿದೆ.

ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್ ಮತ್ತು ಸುರೇಶ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ, ಭಾರತಿ ಜಿ., ಶಿವರಾಜ್ ಕುಮಾರ್, ರಾಜೇಂದ್ರ ನಾಯ್ಸ್ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಲೋಕಾಯುಕ್ತ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments