ಮಣಿಪಾಲ: ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಡ್ರಗ್ ಆರೋಪಿ ಜಗದೀಶ ಪೂಜಾರಿ ಬಂಧನ
ಮಣಿಪಾಲ: ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪಿ.ಐ.ಟಿ. ಎನ್.ಡಿ.ಪಿ.ಎಸ್. (PIT NDPS) ಕಾಯ್ದೆಯಡಿ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ರಾಜೀವನಗರ ನಿವಾಸಿ ಜಗದೀಶ ಪೂಜಾರಿ (33) ಎಂದು ಗುರುತಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿ ಆಧರಿಸಿ, ಪಶ್ಚಿಮ ವಲಯ ಮಂಗಳೂರು ಪೊಲೀಸ್ ಮಹಾನಿರೀಕ್ಷಕರು (ಐಜಿಪಿ) ಜಗದೀಶ ಪೂಜಾರಿಯನ್ನು ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧಿಸಲು ಆದೇಶ ಹೊರಡಿಸಿದ್ದು, ಅದರಂತೆ ಜೂನ್ 12ರಂದು ಬಂಧನ ಕ್ರಮ ಜರುಗಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆ ಹಾಗೂ ಸೆನ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ಹಾಗೂ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳು ದಾಖಲಾಗಿವೆ.
ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ಒಂದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಉಳಿದ ಎರಡು ಪ್ರಕರಣಗಳು ತನಿಖಾ ಹಂತದಲ್ಲಿವೆ. ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಆರೋಪಿಗೆ ಈಗಾಗಲೇ ಶಿಕ್ಷೆಯಾಗಿರುವುದಾಗಿ ತಿಳಿದುಬಂದಿದೆ.
ಬಂಧಿತ ಜಗದೀಶ ಪೂಜಾರಿಯನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.













