ಮಾ.1: ಮೊಗವೀರ ಕುಲಗುರುಗಳ  ಕಂಚಿನ ಪುತ್ಥಳಿ ನಿರ್ಮಾಣಕ್ಕಾಗಿ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣೆ

Spread the love

ಮಾ.1: ಮೊಗವೀರ ಕುಲಗುರುಗಳ  ಕಂಚಿನ ಪುತ್ಥಳಿ ನಿರ್ಮಾಣಕ್ಕಾಗಿ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣೆ

ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟಿರುವ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣದ ಸಲುವಾಗಿ ಮಾರ್ಚ್ 1 ರ ರವಿವಾರ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣಾ ಸಮಾರಂಭ ನಡೆಯಲಿದೆ ಎಂದು ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗುರುಪರಂಪರೆಯ ಗೌರವಕ್ಕಾಗಿ ಐತಿಹಾಸಿಕ ಸಂಕಲ್ಪ ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮೊಗವೀರ ಸಮಾಜದ ಗುರುಪರಂಪರೆಯಲ್ಲಿ 9 ತಲೆಮಾರಿನ ಗುರುಗಳು ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ” ನೀಡಿದ್ದಾರೆ. ಇವರಲ್ಲಿ 1966ರ ಮಾರ್ಚ್ 31ರಂದು ಕೀರ್ತಿಶೇಷರಾದ, ಈ ಗುರುಪರಂಪರೆಯ ಕೊನೆಯ ಗುರುಗಳೂ ಹಾಗೂ ದೇವಸ್ಥಾನದ ಸ್ಥಾಪಕರೂ ಆಗಿರುವ ಶ್ರೀ ಮಾಧವ ಮಂಗಲ ಪೂಜಾರ್ಯರ ಬೃಹತ್ ಕಂಚಿನ ಪುತ್ಥಳಿಯನ್ನು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ವೇಳೆ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಬಂದ ಸೂಚನೆಯಂತೆ, ದೇವಸ್ಥಾನದ ಮುಂಭಾಗದಲ್ಲಿ ಸರ್ವ ಸಮಾಜ ಬಾಂಧವರ ಸಹಕಾರದೊಂದಿಗೆ ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ, 30 ಅಡಿ ಎತ್ತರದ ಕಂಚಿನ ಪುತ್ಥಳಿ ನಿರ್ಮಾಣಗೊಳ್ಳಲಿದೆ. ಪುತ್ತಳಿ ಸ್ಥಳದಲ್ಲೇ ಗುರುಗಳ ಚಿನ್ನ ಲೇಪಿತ ಪಾದುಕೆಯನ್ನು ಪ್ರತಿಷ್ಠಾಪಿಸುವ ಉದ್ದೇಶವಿದೆ. ಈ ಪುತ್ಥಳಿ ಪ್ರತಿಷ್ಠಾಪನೆ ಸಮಾಜದ ಏಕತೆ, ಸ್ವಾಭಿಮಾನ ಹಾಗೂ ಗುರುಭಕ್ತಿಯ ಸಂಕೇತವಾಗಲಿದ್ದು, ಈ ಪುಣ್ಯ ಕಾರ್ಯಕ್ಕೆ ಎಲ್ಲಾ ಮೊಗವೀರ ಸಮಾಜ ಬಾಂಧವರು ಶಕ್ಯಾನುಸಾರ ಕಾಣಿಕೆ ನೀಡುವ ಉದ್ದೇಶದಿಂದ ಸಾಂಕೇತಿಕವಾಗಿ ಸಾಮೂಹಿಕ ಗುರುಪಾದಕಾಣಿಕೆ ಸಮರ್ಪಣಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಂಗವಾಗಿ ದ್ವಿಚಕ್ರ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9.30ಕ್ಕೆ ಜಾಥಾ ಪ್ರಾರಂಭವಾಗಲಿದ್ದು, ಶೀರೂರಿನಿಂದ ಕಾಪುವಿವರೆಗಿನ ಸಮಾಜ ಬಾಂಧವರು ಉತ್ತರ ಭಾಗದ ಪಾಂಗಾಳ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆವರಣದಿಂದ ಹಾಗೂ ಉಪ್ಪಳದಿಂದ ಹೆಜಮಾಡಿಯವರೆಗಿನ ಬಾಂಧವರು ದಕ್ಷಿಣ ಭಾಗದ ಹೆಜಮಾಡಿ ಟೋಲ್ ಪ್ಲಾಜಾದಿಂದ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಉಚ್ಚಿಲದ. ದೇವಸ್ಥಾನವರೆಗೆ ಸಾಗಿ ಬರೆಲಿದ್ದಾರೆ. ಸುಮಾರು 2000ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಭಾಗವಹಿಸುವ ನಿರೀಕ್ಷೆಯಿದ್ದು, ಶಿಸ್ತುಬದ್ಧವಾಗಿ ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಜಾಥಾ ನಡೆಸಲಾಗುವುದು ಎಂದು ತಿಳಿಸಿದರು.

ಸಭಾ ಕಾರ್ಯಕ್ರಮ ಬೆಳಿಗ್ಗೆ 10.30ರಿಂದ ಉಚ್ಚಿಲದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆಯಲಿದ್ದು, ಕೇರಳದ ಉಪ್ಪಳದಿಂದ ಬೈಂದೂರು ತಾಲೂಕಿನ ಶೀರೂರುವರೆಗೆ ವ್ಯಾಪಿಸಿರುವ 336 ಮೊಗವೀರ ಗ್ರಾಮ ಸಭೆಗಳು ಹಾಗೂ ಕೂಡುಕಟ್ಟುಗಳು ಸೇರಿದಂತೆ ದೇಶ-ವಿದೇಶಗಳ ಮೊಗವೀರ ಸಂಘಟನೆಗಳಿಂದ 10 ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಈ ಸಮಾರಂಭದಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದೊಂದಿಗೆ 500ಕ್ಕೂ ಅಧಿಕ ಯುವಕರಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಬೃಹತ್ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗುವುದು ಎಂದು ತಿಳಿಸಿದರು.

ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಸುವರ್ಣ, ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮನೋಜ್ ಸಾಲ್ಯಾನ್ ಉಳ್ಳಾಲ, ದ. ಕ. ಮೊಗವೀರ ಮಹಾಜನ ಸಂಘದ ಪ್ರ. ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಮಲ್ಪೆ, ಬಾರ್ಕೂರು ಹೋಬಳಿಯ ಸತೀಶ್ ಅಮೀನ್ ಬೆಣ್ಣೆಕುದ್ರು, ಬಗ್ವಾಡಿ ಹೋಬಳಿಯ ಉದಯ ಕುಮಾರ್ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಎಸ್. ಕೊರವಡಿ, ಪುತ್ಥಳಿ ನಿರ್ಮಾಣ ಸಮಿತಿ ಕೋಶಾಧಿಕಾರಿ ದಿನೇಶ್ ಎರ್ಮಾಳು,-ಪ್ರಮುಖರಾದ ವಿನಯ್ ಕರ್ಕೇರ, ಮಲ್ಪೆ, ಸುಜಿತ್ ಸಾಲ್ಯಾನ್ ಮೂಲ್ಕಿ, ವಾಸುದೇವ ಸಾಲ್ಯಾನ್, ಸುಧಾಕರ್ ಕುಂದರ್, ಸತೀಶ್ ಕುಂದ‌ರ್ ಮಲ್ಪೆ, ಪವನ್ ಆನಂದ್ ಎರ್ಮಾಳು, ಯಜೇಶ್ ಕರ್ಕೇರ ಮಿತ್ರಬೆಟ್ಟು, ಕಿಶೋರ್ ಡಿ. ಸುವರ್ಣ ಮಲ್ಪೆ, ಕರುಣಾಕರ ಸಾಲ್ಯಾನ್ ಮಲ್ಪೆ, ಶಿವಾನಂದ್ ಕುಂದ‌ರ್ ಮಲ್ಪೆ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments