ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ವಸೂಲಿಗೆ ಹೊರಟ ಪುರಸಭೆ – ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಪುರಸಭೆಯ ಹಿಂದಿನ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಕುಂದಾಪುರ ಪೇಟೆಯಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಪಾರ್ಕಿಂಗ್ ಶುಲ್ಕ ನಿಗದಿ ಮಾಡಿದ್ದನ್ನು ಈಗ ಆಡಳಿತ ಮಂಡಳಿಯ ಅಧಿಕಾರ ಮುಗಿದ ಮೇಲೆ ಹಿಂದಿನ ನಿರ್ಣಯವನ್ನು ಇಟ್ಟುಕೊಂಡು ಪುರಸಭಾ ಮುಖ್ಯಾಧಿಕಾರಿಗಳು ಪಾರ್ಕಿಂಗ್ ಶುಲ್ಕ ವಸೂಲಿಗೆ ಟೆಂಡರ್ ಕರೆದಿರುವುದು ಜನವಿರೋಧಿ ಕ್ರಮವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದಾಪುರ ಪುರಸಭೆ ಕಟ್ಟಡ ನಿರ್ಮಾಣದ ಪರವಾನಿಗೆ ನೀಡುವಾಗ ಪ್ರತಿಯೊಂದಕ್ಕೂ ತೆರಿಗೆ ಪಡೆದುಕೊಂಡು ಈಗ ಹೊಸದಾಗಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಹೊರಟಿರುವುದು ಕಾನೂನು ವಿರೋಧಿ ಕ್ರಮವಾಗಿದೆ. ಇದರಿಂದ ವ್ಯಾಪಾರಸ್ಥರು, ಶುಲ್ಕ ವಸೂಲಿ ಟೆಂಡರ್ ಪಡೆದವರು ಮತ್ತು ವಾಹನ ಮಾಲಕರುಗಳ ನಡುವೆ ಅನಗತ್ಯ ವಾಗ್ವಾದಕ್ಕೆ ಎಡೆಮಾಡಿಕೊಡುತ್ತದೆ. ಪುರಸಭೆ ಪುರಸಭೆ ವ್ಯಾಪ್ತಿಯಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಿ ಪಾರ್ಕಿಂಗ್ ಸಮಸ್ಯೆ ಪರಿಹಾರ ಮಾಡಬೇಕು ಹಾಗೂ ಈಗಾಗಲೇ ವಾಹನ ಪಾರ್ಕಿಂಗ್ ಶುಲ್ಕ ವಸೂಲಿಗೆ ಕರೆದಿರುವ ಟೆಂಡರ್ ಪ್ರಕ್ರಿಯೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.













