ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ʼಈದುಲ್ ಫಿತ್ರ್ʼ ಆಚರಣೆ

Spread the love

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ʼಈದುಲ್ ಫಿತ್ರ್ʼ ಆಚರಣೆ

ಉಡುಪಿ: ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನು ಶುಕ್ರವಾರ ಸಂಭ್ರಮ ಸಡಗರದಿಂದ ಆಚರಿಸಿದರು.

ಉಡುಪಿ ನಗರ, ಕಾಪು, ಬ್ರಹ್ಮಾವರ ಕುಂದಾಪುರ, ಬೈಂದೂರು ಹೆಬ್ರಿ, ಕಾರ್ಕಳ ತಾಲೂಕುಗಳ ಎಲ್ಲ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಮುಸ್ಲಿಮರು ಬೆಳಗ್ಗೆ ಅರ್ಹರಿಗೆ ಫಿತರ್ ಝಕಾತ್ ನೀಡಿದ ಬಳಿಕ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಪೂರ್ ಈದ್ ನಮಾಝ್ ನಲ್ಲಿ ಪಾಲ್ಗೊಂಡರು

ಕುಂದಾಪುರ ಜುಮಾ ಮಸೀದಿಯಿಂದ ಬೆಳಗ್ಗೆ ಈದ್ ಮೆರವಣಿಗೆ ಹೊರಟು, ಕುಂದಾಪುರ ಈದ್ಗಾ ಮೈದಾನದಲ್ಲಿ ಈದ್ ವಿಶೇಷ ನಮಾಝ್ ನೆರವೇರಿಸಲಾಯಿತು. ಬ್ರಹ್ಮಗಿರಿ ನಾಯರ್ಕೆರೆಯ ಹಾಶಿಮಿ ಮಸೀದಿಯ ಇಮಾಮ್ ಒಬೇದುರ್ರಹ್ಮಾನ್ ನದ್ವಿ ಈದ್ ವಿಶೇಷ ನಮಾಝ್ ನಿರ್ವಹಿಸಲಾಯಿತು

ಬ್ರಹ್ಮಗಿರಿ ನಾಯರ್ ಕೆರೆ ಹಾಶಿಮಿ ಮಸೀದಿಯಲ್ಲಿ ಈದ್ ಸಂದೇಶ ನೀಡಿದ ಇಮಾಮ್ ಒಬೇದುರ ರಹ್ಮಾನ್ ನದ್ವಿ “ಪೋಷಕರು ತಮ್ಮ ಮಕ್ಕಳನ್ನು ಮಾದಕ ವಸ್ತು ಬಲಿಯಾಗದಂತೆ ಎಚ್ಚರ ವಹಿಸಬೇಕು. ಇಂದು ಅತಿ ವೇಗ ಅಜಾಗ್ರತೆ ವಾಹನ ಚಲಾವಣೆಯ ಪರಿಣಾಮ ರಸ್ತೆ ಅಪಘಾತಕ್ಕೆ ಯುವಜನತೆ ಬಲಿಯಾಗುತ್ತಿದ್ದು ಈ ಬಗ್ಗೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಎಲ್ಲರೊಂದಿಗೆ ಬೆರೆತು ಹಬ್ಬವನ್ನು ಆಚರಿಸುವ ಮೂಲಕ ಸೌಹರ್ದತೆಯನ್ನು ಎತ್ತಿ ಹಿಡಿಯಬೇಕು” ಎಂದರು

ಈ ಸಂದರ್ಭದಲ್ಲಿ ಧರ್ಮಗುರುಗಳು ತಮ್ಮ ಈದ್ ಸಂದೇಶದಲ್ಲಿ ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಿದರು. ಅಲ್ಲದೆ ಎಲ್ಲರೂ ಪರಸ್ಪರ ಸಹೋದರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಸೌಹಾರ್ದ ಸಂದೇಶ ನೀಡಿದರು.

ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮುಂಜಾಗೃತಾ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಬಹುತೇಕ ಮಸೀದಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.


Spread the love
Subscribe
Notify of

0 Comments
Inline Feedbacks
View all comments