ಆಹಾರ ಸುರಕ್ಷತೆ ನಿಯಮ ಉಲ್ಲಂಘಿಸಿದರೆ ಪರಿಚಯಸ್ಥರಿದ್ದರೂ ಬಿಡಲ್ಲ: ಯು.ಟಿ. ಖಾದರ್

Spread the love

ಆಹಾರ ಸುರಕ್ಷತೆ ನಿಯಮ ಉಲ್ಲಂಘಿಸಿದರೆ ಪರಿಚಯಸ್ಥರಿದ್ದರೂ ಬಿಡಲ್ಲ: ಯು.ಟಿ. ಖಾದರ್

ಮಂಗಳೂರು: ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರು ನನ್ನ ಪರಿಚಯಸ್ಥರಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನನ್ನಿಂದ ನಯಾಪೈಸೆಯ ಉಪಕಾರವೂ ಸಿಗುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಜನರಿಗೆ ಗುಣಮಟ್ಟದ, ಶುದ್ಧ ಹಾಗೂ ಆರೋಗ್ಯಕರ ಆಹಾರ ಒದಗಿಸುವುದು ಸರ್ಕಾರದ ಕರ್ತವ್ಯ. ಆಹಾರ ಸುರಕ್ಷತಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಹೋಟೆಲ್, ಕ್ಯಾಟರಿಂಗ್ ಸಂಸ್ಥೆಗಳು ಹಾಗೂ ಪಿಜಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಬುಧವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಈಗಾಗಲೇ ಸ್ವೀಟ್ ಅಂಗಡಿಗಳು ಸೇರಿದಂತೆ ವಿವಿಧ ಆಹಾರ ಘಟಕಗಳ ಮೇಲೆ ದಾಳಿ ನಡೆಸಲಾಗಿದ್ದು, ಎರಡು ಘಟಕಗಳನ್ನು ಬಂದ್ ಮಾಡಲಾಗಿದೆ. ಈ ಕಾರ್ಯಾಚರಣೆ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ಮಂಗಳೂರು, ಉಡುಪಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ಮೈಸೂರಿನಲ್ಲೂ ತೀವ್ರಗೊಳ್ಳಲಿದೆ. ಮಂಗಳೂರಿನಲ್ಲೂ ಕೆಲವೆಡೆ ಪರಿಶೀಲನೆ ನಡೆಸಲಾಗಿದೆ ಎಂದರು.

ವ್ಯಾಪಾರಿಗಳನ್ನು ಮುಚ್ಚಿಸುವುದು ಅಥವಾ ಬೆದರಿಸುವುದು ಸರ್ಕಾರದ ಉದ್ದೇಶವಲ್ಲ. ಆದರೆ ಗ್ರಾಹಕರಿಗೆ ಯಾವುದೇ ರೀತಿಯ ಮೋಸವಾಗಬಾರದು. ಹೋಟೆಲ್ ಮಾಲೀಕರು ನನ್ನ ಪರಿಚಯಸ್ಥರಾಗಿರಬಹುದು. ಆದರೆ ಹೋಟೆಲ್‌ಗೆ ಊಟಕ್ಕೆ ಬರುವ ಗ್ರಾಹಕರೂ ನನ್ನ ಪರಿಚಯಸ್ಥರೇ. ಹೀಗಾಗಿ ತಪ್ಪು ಮಾಡಿದವರು ಯಾರೇ ಆಗಿದ್ದರೂ, ಅವರು ಪರಿಚಯಸ್ಥರೆಂಬ ಕಾರಣಕ್ಕೆ ಯಾವುದೇ ರಿಯಾಯಿತಿ ನೀಡುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ಎಂದು ಯು.ಟಿ. ಖಾದರ್ ಹೇಳಿದರು.

ಪಿಜಿ ಹಾಗೂ ಹಾಸ್ಟೆಲ್‌ಗಳನ್ನು ನಡೆಸುವವರು ಅಲ್ಲಿಗೆ ಬರುವ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪರಿಗಣಿಸಿ, ಅವರಿಗೆ ಶುಚಿ, ರುಚಿ ಹಾಗೂ ಪೌಷ್ಟಿಕ ಆಹಾರ ಒದಗಿಸಬೇಕು ಎಂದು ಸಚಿವರು ಸೂಚಿಸಿದರು.

ಅತ್ಯಾಧುನಿಕ NABL ಲ್ಯಾಬ್ ಸ್ಥಾಪನೆ

ಆಹಾರ ಕಲಬೆರಕೆ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದ ಪರೀಕ್ಷಾ ವರದಿಗಳು ನ್ಯಾಯಾಲಯದಲ್ಲಿಯೂ ಬಲವಾಗಿ ಸಾಬೀತಾಗುವಂತೆ ಮಾಡಲು ಅಂತಾರಾಷ್ಟ್ರೀಯ ಗುಣಮಟ್ಟದ, ಸುಸಜ್ಜಿತ NABL ಮಾನ್ಯತೆ ಹೊಂದಿರುವ ಪ್ರಯೋಗಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಕೋಲ್ಡ್ ಸ್ಟೋರೇಜ್‌ಗಳಲ್ಲಿ ಮೀನು ಹಾಗೂ ಮಾಂಸವನ್ನು ದೀರ್ಘಕಾಲ ಸಂಗ್ರಹಿಸುವ ವಿಚಾರದಲ್ಲಿಯೂ FSSAI ನಿಯಮಾವಳಿಗಳ ಅನ್ವಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ. ಖಾದರ್ ಹೇಳಿದರು.


Spread the love
Subscribe
Notify of

0 Comments