ಮಂಗಳೂರು ದಸರಾದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ರಾತ್ರಿ ಬಸ್ ಸಂಚಾರದ ಸಮಯ ವಿಸ್ತರಿಸಿ-ಸಚಿವ ಖಾದರ್ ಸೂಚನೆ
ಮಂಗಳೂರು: ಈ ಬಾರಿ ಮಂಗಳೂರು ದಸರಾವನ್ನು ಅತ್ಯಂತ ವೈಭವದಿಂದ ಪಾವಿತ್ರತೆ, ಶ್ರದ್ಧೆ ಮತ್ತು ಭಕ್ತಿಗೆ ಧಕ್ಕೆಯಾಗದಂತೆ ಸ್ಥಳೀಯರ ಸಹಿತ ಹೊರ ಭಾಗದ ಭಕ್ತರನ್ನು, ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಆಚರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಲಹೆ ಮಾಡಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಮಂಗಳೂರು ದಸರಾ ಮಹೋತ್ಸವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ದಿಶೆಯಲ್ಲಿ ಎಲ್ಲಾ ಇಲಾಖೆಗಳ ಸಹಕಾರವನ್ನು ಕೋರಿದರು.
ಹಬ್ಬದ ದಿನ ಎಲ್ಲಿಯೂ ಕಸ ಇರದಂತೆ ನೋಡಿಕೊಳ್ಳಿ, ಎಲ್ಲಾ ಬೀದಿಯಲ್ಲೂ ದಾರಿ ದೀಪ ಇರುವಂತೆ ನೋಡಿಕೊಳ್ಳಿ. ಈ ಸಂಧರ್ಭದಲಿ ಪವರ್ ಕಟ್ ಆಗದಂತೆ ನೋಡಿಕೊಳ್ಳಿ. ಕೆಲವು ಒಳ ರಸ್ತೆಗಳಲ್ಲಿಯೂ ಬೀದಿ ದೀಪ ಇರುವಂತೆ ನೋಡಿಕೊಳ್ಳಿ. ನಗರದ ದೇವಾಲಯದಲ್ಲಿ ಶೌಚಾಲಯ ಸಮಸ್ಯೆ ಇದ್ರೆ ಅದರ ವ್ಯವಸ್ಥೆ ಮಾಡಿಸಿ. ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ತಿ ಲೈಟಿಂಗ್, ಪ್ರತಿ ದಿನ ನಗರ ಸ್ವಚ್ಛತೆ ಕಾಪಾಡಲು ಕ್ರಮ ಆಗಬೇಕು
ಮೆರವಣಿಗೆ ಸಂದರ್ಭ ವಾಹನ ಸಂಚಾರಕ್ಕೆ ಸೂಕ್ತ ವ್ಯವಸ್ಥೆ, ರಸ್ತೆಗಳ ಹೊಂಡ ಮುಚ್ಚುವುದು, ನಗರದಲ್ಲಿ ಇರುವಂಥ ರಸ್ತೆಯ ಹೊಂಡ ಗುಂಡಿ ಮುಚ್ಚಿ ಎಂದು ಸಲಹೆ ನೀಡಿದ್ರು. ಅದರ ಜೊತೆಗೆ ನಗರದಲ್ಲಿ ಬಸ್ ಸಂಚಾರ ರಾತ್ರಿ 9 ಗಂಟೆಗೆ ಸಾಮಾನ್ಯವಾಗಿ ಬಂದ್ ಆಗುತ್ತದೆ. ಆದರೆ ದಸರಾ ವೇಳೆ ಬಸ್ಸಿನ ಸಮಯ ವಿಸ್ತರಿಸಬೇಕು. ಕೆಎಸ್ ಆರ್ ಟಿಸಿ ಬಸ್ಸುಗಳನ್ನು ಕೂಡಾ ಹೆಚ್ಚಿಸಬೇಕು. ಎಂದು ಸಚಿವರು ಸೂಚಿಸಿದರು.
ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಶಾಸಕ ವೇದವ್ಯಾಸ್ ಕಾಮತ್ ಪ್ರಸ್ತಾವಿಸಿ, ತ್ಯಾಜ್ಯವನ್ನು ಸಣ್ಣ ವಾಹನಗಳಿಂದ ದೊಡ್ಡ ವಾಹನಗಳಿಗೆ ವರ್ಗಾಯಿಸುವ ಕಾರ್ಯವನ್ನು ದೂರದಲ್ಲಿ ಪ್ರತ್ಯೇಕ ಸ್ಥಳದಲ್ಲಿ ನಿರ್ವಹಿಸ ಬೇಕೆಂದು ಸಲಹೆ ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮೂಡಾ ಆಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್. ಗಟ್ಟಿ, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಎಸ್.ಪಿ.ಡಾ. ಅರುಣ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ದೇವಸ್ಥಾನಗಳ ಮುಖ್ಯಸ್ಥರು, ರಾಜಕೀಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು













