ಪಂಚ ಗ್ಯಾರಂಟಿ ಅದಾಲತ್ ಹಾಗೂ ಸಮಾವೇಶಕ್ಕೆ ಅಗತ್ಯ ಸಹಕಾರ ನೀಡಿ : ರಮೇಶ್ ಕಾಂಚನ್

Spread the love

ಪಂಚ ಗ್ಯಾರಂಟಿ ಅದಾಲತ್ ಹಾಗೂ ಸಮಾವೇಶಕ್ಕೆ ಅಗತ್ಯ ಸಹಕಾರ ನೀಡಿ : ರಮೇಶ್ ಕಾಂಚನ್

ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಫೆಬ್ರವರಿ ಎರಡನೇ ವಾರದಲ್ಲಿ ಉಡುಪಿ ತಾಲೂಕು ವ್ಯಾಪ್ತಿಯ ಪಂಚಾಯತ್ ಹಾಗೂ ಉಡುಪಿ ನಗರಸಭೆಯ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ಪಂಚ ಗ್ಯಾರಂಟಿ ಅದಾಲತ್ ಹಾಗೂ ಗೃಹಲಕ್ಷ್ಮೀ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅಧಿಕಾರಿಗಳು, ಗ್ಯಾರಂಟಿ ಯೋಜನೆಯ ಸದಸ್ಯರುಗಳು ಅಗತ್ಯ ಸಹಕಾರ ನೀಡುವಂತೆ ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.

ಅವರು ಇಂದು ಉಡುಪಿ ತಾಲೂಕು ಪಂಚಾಯತ್ನಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸರಕಾರವು ಬಡವರ, ದೀನದಲಿತರ ಪರವಾಗಿ ಕಾಳಜಿ ವಹಿಸಿ, ಅವರನ್ನು ಆರ್ಥಿಕವಾಗಿ ಸದೃಢವಾಗಿಸಿರುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ತಳಹಂತದಲ್ಲಿ ಪ್ರತಿಯೊಬ್ಬ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸಮಿತಿಯ ಸದಸ್ಯರುಗಳು ಯೋಜನೆಯ ಬಗ್ಗೆ ಅರಿವು ಮೂಡಿಸಲು ಈಗಾಗಲೆ ನಮ್ಮ ನಡಿಗೆ ಗ್ರಾಮ ಪಂಚಾಯತ್ ಕಡೆಗೆ ಹಾಗೂ ನಮ್ಮ ನಡೆ ವಾರ್ಡ್ ಕಡೆಗೆ ಎಂಬ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಫೆಬ್ರವರಿ ಮುಂದಿನ ವಾರದಲ್ಲಿ ಆಯೋಜಿಸಲಾಗುವ ಪಂಚ ಗ್ಯಾರಂಟಿ ಅದಾಲತ್ ಹಾಗೂ ಸಮಾವೇಶವನ್ನು ಇದೇ ರೀತಿಯಲ್ಲಿ ಯಶಸ್ವಿಗೊಳಿಸಲು ಅಗತ್ಯ ಸಹಕಾರ ನೀಡಬೇಕು ಎಂದರು.

ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲಿಸಿದ ಅವರು, ಗೃಹಲಕ್ಷ್ಮೀ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಯೋಜನೆ ಪ್ರಾರಂಭವಾದ ಆಗಸ್ಟ್ 2023 ರಿಂದ ಅಕ್ಟೋಬರ್ 2025 ರ ವರೆಗೆ 9,66,991 ಫಲಾನುಭವಿಗಳಿಗೆ ಒಟ್ಟು 193 ಕೋಟಿ ರೂ. ಗಳಿಗೆ ಹೆಚ್ಚು ನಗದು ಹಣ ಜಮಾ ಮಾಡಲಾಗಿದೆ. ನವೆಂಬರ್ ನಿಂದ ಹಣ ಪಾವತಿಗೆ ಬಾಕಿ ಇರುವುದಾಗಿ ತಿಳಿಸಿದರು.

ಶಕ್ತಿ ಯೋಜನೆಯಡಿ ಉಡುಪಿ ತಾಲೂಕಿನಲ್ಲಿ ಜನವರಿ ಮಾಹೆಯಲ್ಲಿ ಒಟ್ಟು 15,12,399 ಮಹಿಳಾ ಪ್ರಯಾಣೀಕರು ಶಕ್ತಿ ಯೋಜನೆಯ ಪ್ರಯೋಜನ ಪಡೆದಿದ್ದು, ಇದರಿಂದ ಕೆ.ಎಸ್.ಆರ್.ಟಿ.ಸಿ ಗೆ 4.62 ಕೋಟಿ ಗೂ ಹೆಚ್ಚು ಆದಾಯ ಬಂದಿದೆ. ಯೋಜನೆಯು ಜೂನ್ 2023 ರಲ್ಲಿ ಜಾರಿಗೆ ಬಂದಿದ್ದು, ಈವರೆಗೆ ಒಟ್ಟು 3,68,13,093 ಮಹಿಳಾ ಪ್ರಯಾಣಿಕರು ಪ್ರಯಾಣಿಸುವುದರೊಂದಿಗೆ 142.2 ಕೋಟಿ ರೂ. ಗಿಂತಲೂ ಹೆಚ್ಚು ಆದಾಯ ಬಂದಿರುವುದಾಗಿ ತಿಳಿಸಿದರು.

ಯುವಜನರಿಗೆ ಉದ್ಯೋಗ ಅರಸುವ ಅವಧಿಯಲ್ಲಿ ಆರ್ಥಿಕವಾಗಿ ಸಹಾಯಧನ ಒದಗಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಯುವನಿಧಿ ಯೋಜನೆಯಡಿ ಉಡುಪಿ ತಾಲೂಕಿನಲ್ಲಿ ಈವರೆಗೆ 832 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 681 ವಿದ್ಯಾರ್ಥಿಗಳ ಖಾತೆಗೆ 1.72 ಕೋಟಿ ರೂ. ನಗದು ಹಣವನ್ನು ಭರಿಸಿರುವುದಾಗಿ ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಉಡುಪಿ ತಾಲೂಕಿನ ಕಲ್ಯಾಣಪುರ ಶಾಖೆ ವ್ಯಾಪ್ತಿಯಲ್ಲಿರುವ ಬ್ರಹ್ಮಾವರ ಉಪವಿಭಾಗ ವ್ಯಾಪ್ತಿಯಲ್ಲಿ ಡಿಸೆಂಬರ್ ವರೆಗೆ 6.38 ಕೋಟಿ, ಉಡುಪಿ ಉಪವಿಭಾಗ ವ್ಯಾಪ್ತಿಯಲ್ಲಿ 22.95 ಕೋಟಿ ಹಾಗೂ ಮಣಿಪಾಲ ಉಪವಿಭಾಗ ವ್ಯಾಪ್ತಿಯಲ್ಲಿ 89,38,330 ಕೋಟಿ ರೂ. ಹಣವನ್ನು ಸರಕಾರದಿಂದ ಭರಿಸಲಾಗಿರುವುದಾಗಿ ತಿಳಿಸಿದರು.

ಬಡವರ ಹಸಿವು ನೀಗಿಸಲು ಜಾರಿಗೊಳಿಸಲಾದ ಅನ್ನಭಾಗ್ಯ ಯೋಜನೆಯಡಿ ಜನವರಿ ವರೆಗೆ ಶೇ. 94.80 ರಷ್ಟು ಪ್ರಗತಿ ಸಾಧಿಸಿರುವುದಾಗಿ ತಿಳಿಸಿದರು.

ಉಡುಪಿ ಜಿಲ್ಲೆಗೆ 250 ಹೆಚ್ಚುವರಿ ಹೊಸ ಪಡಿತರ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಮಾನವೀಯತೆಯ ಆಧಾರದಲ್ಲಿ ಪ್ರತಿ ಏರಿಯಾದಲ್ಲಿ ಶೇ. 40 ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರು ವಾಸವಿದ್ದಲ್ಲಿ ಆ ಸ್ಥಳದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಪ್ರಸ್ತಾವನೆ ಸಲ್ಲಿಸಲು ಸೂಕ್ತ ಕ್ರಮವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ (ಪಂ.ರಾಜ್) ಫರ್ಜಾನ ಎಂ., ಉಡುಪಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯರುಗಳು, ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments