ಸಿದ್ದರಾಮಯ್ಯ‌ರವರಿಂದ ಸರ್ವಜನಾಂಗದ ಅಭಿವೃದ್ಧಿಪರ ಬಜೆಟ್ : ರಮೇಶ್ ಕಾಂಚನ್

Spread the love

ಸಿದ್ದರಾಮಯ್ಯ‌ರವರಿಂದ ಸರ್ವಜನಾಂಗದ ಅಭಿವೃದ್ಧಿಪರ ಬಜೆಟ್ : ರಮೇಶ್ ಕಾಂಚನ್

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಸಂಪೂರ್ಣ ಜನಪರವಾಗಿದ್ದು ಸರ್ವಜನಾಂಗದ ಅಭಿವೃದ್ಧಿಪರ ಬಜೆಟ್ ಆಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅಭಿಪ್ರಾಯಪಟ್ಟಿದ್ದಾರೆ.

ಕರಾವಳಿ ಜಿಲ್ಲೆಗಳನ್ನು ಗಮನದಲ್ಲಿರಿಸಿ ಮೀನುಗಾರಿಕೆಗಾಗಿ ಪೋತ್ರಾಹ ಧನ 20 ಸಾವಿರ ರೂ.ಗೆ ಏರಿಕೆ ಮಾಡುವುದರೊಂದಿಗೆ ಮಂಗಳೂರು ಮೀನುಗಾರಿಕಾ ವಿವಿಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್, ಮೀನು ಮಾರಾಟ ಮಾಡಲು ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು. 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಕೃಷಿ ಸಾಲ ನೀಡಲಾಗುವುದು. ಜಿಲ್ಲೆಯ ಪ್ರಮುಖ ದೇವಾಲಯವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಭಿವೃದ್ಧೀಯ ನಿಟ್ಟಿನಲ್ಲಿ ಪ್ರಾಧಿಕಾರ ರಚನೆ ಮಾಡಿರುವುದು ಸ್ವಾಗತಾರ್ಹ ವಿಚಾರವಾಗಿದೆ.

ಹೆಚ್ಚುತ್ತಿರುವ ಮೊಬೈಲ್ ಬಳಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಹಾಗೂ ಅಡ್ಡಪರಿಣಾಮ ತಡೆಗಟ್ಟುವ ಹಿನ್ನೆಲೆಯಲ್ಲಿ 16 ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧ ಮಾಡಲು ನಿರ್ಧರಿಸಿರುವುದು ಕ್ರಾಂತಿಕಾರಕ ಹೆಜ್ಜೆಯಾಗಿದೆ.
ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಸಂಪರ್ಕ ರಹಿತ ಹಾಗೂ ಜನವಸತಿ ಪ್ರದೇಶಗಳಿಗೆ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ 300 ಕಾಲುಸಂಕಗಳನ್ನು ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ. ವಸತಿ ರಹಿತರಿಗೆ ಮನೆಗಳು, ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗಗಳನ್ನು ಕಲ್ಪಿಸಿಕೊಡಲು ಸರಕಾರ ನಿರ್ಧರಿಸಿದೆ.

ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಜಾರಿಗೆ ತರಲಾಗುವುದು. ವಾಯುಯಾನ ಹಾಗೂ ಜಲಸಾಹಸ ಯೋಜನೆ ಅನುಷ್ಠಾನಗೊಳಿಸಲಾಗುವುದು. ಸೀ ಪ್ಲೇನ್, ಹೆಲಿಟ್ಯಾಕ್ಸಿ, ಜಾಯ್ ರೈಡ್, ರಿವರ್ ಕ್ರೂಸ್‌ಗೆ ಪ್ರೋತ್ಸಾಹ ನೀಡಲಾಗುತ್ತದೆ. ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ, ಪೊಲೀಸರಿಗೆ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಹೇಳಿರುವುದು ಸಂತಸದ ಸಂಗತಿಯಾಗಿದೆ.

ರಾಜ್ಯದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ಅನುದಾನ ಮೀಸಲಿಡಲಾಗಿದೆ. ಶಕ್ತಿ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಗೃಹಜ್ಯೋತಿ ಯೋಜನೆಗೆ ಈ ವರ್ಷ 10,578 ಕೋಟಿ ರೂ. ಹಣ ಮೀಸಲಿಡಲಾಗಿದೆ.

ದಾಖಲೆಯ 17ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ‌ರವರು ರಾಜ್ಯದ ಅಭಿವೃದ್ಧಿ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸರ್ವತೋಮುಕ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದು ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments