SIR ಕರಡು ಪಟ್ಟಿ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,50,153 ಮತದಾರರಿಗೆ ನೋಟೀಸ್: ಜಿಲ್ಲಾಧಿಕಾರಿ ದರ್ಶನ್

Spread the love

SIR ಕರಡು ಪಟ್ಟಿ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,50,153 ಮತದಾರರಿಗೆ ನೋಟೀಸ್: ಜಿಲ್ಲಾಧಿಕಾರಿ ದರ್ಶನ್

ಮಂಗಳೂರು : ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಅದರಂತೆ ದ.ಕ. ಜಿಲ್ಲೆಯಲ್ಲಿ 16,46,387 ಮತದಾರರಿದ್ದಾರೆ. ಮ್ಯಾಪಿಂಗ್ ಆಗದಿರುವ ಮತ್ತು ಹೆಸರು ಬದಲಾವಣೆ, ಪೋಷಕರ ಹೆಸರು ಬದಲಾವಣೆ, ವಯಸ್ಸಿನ ಅಂತರ ಸೇರಿದಂತೆ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ 1,50,153 ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟೀಸು ಹಂಚಿಕೆಯಾಗಲಿದೆ.

ಆ. 24ರಿಂದ ಆರಂಭಗೊಂಡು ಸೆಪ್ಟಂಬರ್ 23ರ ಅವಧಿಯಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ 1,50,153 ಮತದಾರರಿಗೆ ನೋಟೀಸು ಹಂಚಿಕೆಯಾಗಿ ಆ ಅವಧಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.

ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳದ ವಿವರ ನೋಟೀಸಿನಲ್ಲಿ ಇರಲಿದ್ದು, ಬಿಎಲ್‌ಒಗಳು ನಿಗದಿತ ಅವಧಿಯೊಳಗೆ ನೋಟೀಸು ಮತದಾರರ ಮನೆಗಳಿಗೆ ತಲುಪಿಸಲಿದ್ದಾರೆ. ನೋಟೀಸಿನಲ್ಲಿ ತಿಳಿಸಲಾದ ನಿಗದಿತ ಅವಧಿಯೊಳಗೆ ಮತದಾರರು ಲಿಖಿತ ಮನವಿಯೊಂದಿಗೆ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯನ್ನು ಭೇಟಿಯಾಗಲು ಸಾಧ್ಯವಾಗದಿದ್ದಲ್ಲಿ ಮತ್ತೊಂದು ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿಯೂ ಮತದಾರರು ವಿಚಾರಣೆಗೆ ಹಾಜರಾಗದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುತ್ತದೆ ಎಂದು ಅವರು ಹೇಳಿದರು.

ಮತದಾರರು ವಿಚಾರಣೆಗೆ ಹಾಜರಾಗುವ ಸಂದರ್ಭ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿಕೊಂಡು ಬರಬೇಕು. ಮತದಾರರು ಆನ್‌ಲೈನ್ ಮೂಲಕ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು. ಆದರೆ ಭೌತಿಕವಾಗಿ ಮತದಾರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ ಎದುರು ಹಾಜರಾಗುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ದರ್ಶನ್ ಸ್ಪಷ್ಟಪಡಿಸಿದರು.

ಈಗಾಗಲೇ ಚುನಾವಣಾ ಆಯೋಗವು ತಿಳಿಸಿರುವಂತೆ, 1987ರ ಜುಲೈ 1ಕ್ಕಿಂತ ಮೊದಲು ಜನಿಸಿದವರಾಗಿದ್ದರೆ ಸ್ವಂತಕ್ಕೆ ಸಂಬಂಧಿಸಿದಂತೆ ಜನ್ಮ ದಿನಾಂಕ ಮತ್ತು ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆಯನ್ನು ಒದಗಿಸಬೇಕು.

1987 ಜುಲೈ 1ರಿಂದ 2004ರ ಡಿಸೆಂಬರ್ 2ರೊಳಗೆ ಜನಿಸಿದ್ದವರು ಜನ್ಮ ದಿನಾಂಕ, ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆ ಜತೆಗೆ ತಂದೆ ಅಥವಾ ತಾಯಿಗೆ ಸಂಬಂಧಿಸಿದಂತೆ ಅವರ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.

ಜಿಲ್ಲೆಯ ಎಸ್‌ಐಆರ್ ಪ್ರಕ್ರಿಯೆಯ ವಿವರ

*2026ರ ಜೂ.16ರಂತೆ ಜಿಲ್ಲೆಯಲ್ಲಿರುವ ಮತದಾರರು: 18,03,766

* ಹಂಚಿಕೆ ಮಾಡಲಾದ ಎನುಮರೇಶನ್ ಫಾರಂಗಳ ಸಂಖ್ಯೆ: 18,03,766

*ಡಿಜಿಟೈಸ್ ಮಾಡಿದ ಎನುಮರೇಶನ್ ಫಾರಂಗಳ ಸಂಖ್ಯೆ: 16,46,387 (ಶೇ.91.27)

*ಎಎಸ್‌ಡಿಡಿ ಮಾರ್ಕ್ ಮಾಡಿರುವ ಸಂಖ್ಯೆ: 1,57,379 (ಶೇ.8.73)

*ಗೈರು ಮತದಾರರು: 11,124 (ಶೇ.0.62)

*ಶಾಶ್ವತವಾಗಿ ವಲಸೆ ಹೋಗಿರುವ ಮತದಾರರು: 82988(ಶೇ.4.60)

* ಮರಣ ಹೊಂದಿರುವ ಮತದಾರರು: 45,318 (ಶೇ.2.51)

* ಬೇರೆಡೆ ಮತಪತ್ರ ಹೊಂದಿರುವವರು: 15,395 (ಶೇ.0.85)

*ಇತರೆ: 2,554 (ಶೇ.0.14)

154 ಹೆಚ್ಚುವರಿ ಸಹಾಯಕ ನೋಂದಣಾಧಿಕಾರಿಗಳಿಗೆ ಗೆ ಪ್ರಸ್ತಾವ

ದ.ಕ.ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಸದ್ಯ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 154 ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಲು ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದ್ದು, ಒಂದೆರಡು ದಿನಗಳಲ್ಲಿ ಸಮ್ಮತಿ ಸಿಗಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.

ಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ., ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ. ಸಂತೋಷ್ ಕುಮಾರ್, ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಅಕ್ಷತಾ ಮೊದಲಾದವರು ಉಪಸ್ಥಿತರಿದ್ದರು.

ನೋಟೀಸ್ ಬಂದರೆ ಕೈಬಿಡುವುದು ಎಂದರ್ಥವಲ್ಲ

2026ರ ಜೂನ್‌ವರೆಗಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ, 2002ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಸಂದರ್ಭ ಹೆಸರು ಬಿಟ್ಟು ಹೋಗಿದ್ದಲ್ಲಿ ಅತವಾ ಹೆಸರಿನಲ್ಲಿನ ಬದಲಾವಣೆ ಹಾಗೂ ಇತರ ಕಾರಣದಿಂದ ಕರಡು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವ ಮತದಾರರಿಗೆ ನೋಟೀಸ್ ಬಂದರೆ ಅವರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು ಎಂದರ್ಥವಲ್ಲ. ಈ ಬಗ್ಗೆ ಯಾವುದೇ ರೀತಿಯ ಅನಗತ್ಯ ಭಯ ಮತದಾರರಿಗೆ ಬೇಡ. ದಾಖಲೆಗಳನ್ನು ಪಡೆದು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗುವಂತೆ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.


Spread the love
Subscribe
Notify of

0 Comments