ಉಡುಪಿ ಪರ್ಯಾಯಕ್ಕೆ ಮುಸ್ಲಿಂ ಸೌಹಾರ್ದ ಹೊರೆಕಾಣಿಕೆಗೆ ಪರ್ಯಾಯ ಸ್ವಾಗತ ಸಮಿತಿ ಅನುಮತಿ ನೀಡಿಲ್ಲ : ಯಶ್ಪಾಲ್ ಸುವರ್ಣ
ಶೀರೂರು ಪರ್ಯಾಯ ಮಹೋತ್ಸವಕ್ಕೆ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿಯಿಂದ ಹೊರೆಕಾಣಿಕೆ ನೀಡುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದು, ಈ ಬಗ್ಗೆ ಪರ್ಯಾಯ ಸ್ವಾಗತ ಸಮಿತಿ ಯಾವುದೇ ಅನುಮತಿ ನೀಡಿಲ್ಲ ಎಂದು ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಸಮಿತಿಗೆ ಮುಸ್ಲಿಂ ಸೌಹಾರ್ದ ಸಮಿತಿಯವರು ಈವರೆಗೂ ಹೊರೆಕಾಣಿಕೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ, ಮಠದ ವತಿಯಿಂದಲೂ ಮುಸ್ಲಿಂ ಸೌಹಾರ್ದ ಸಮಿತಿಗೆ ಯಾವುದೇ ಹೊರೆಕಾಣಿಕೆ ನೀಡುವಂತೆ ಮನವಿಯನ್ನು ಮಾಡಿರುವುದಿಲ್ಲ.
ಹೊರೆಕಾಣಿಕೆ ಸಮಿತಿ ಈ ಬಗ್ಗೆ ಮಾಹಿತಿ ನೀಡದೆ ಮುಸ್ಲಿಂ ಸೌಹಾರ್ದ ಸಮಿತಿ ಗೊಂದಲ ಸೃಷ್ಟಿಸಲು ಮುಂದಾಗಿದ್ದು, ಅತ್ಯಂತ ಧಾರ್ಮಿಕ ಶ್ರದ್ಧಾ ಭಕ್ತಿಯ ಮೂಲಕ ಶ್ರೀ ಕೃಷ್ಣ ದೇವರಿಗೆ ಸಮರ್ಪಿಸುವ ಹೊರೆಕಾಣಿಕೆ ವಿಚಾರದಲ್ಲಿ ಸಮಿತಿಯ ನಿರ್ಧಾರವೇ ಅಂತಿಮವಾಗಿದ್ದು, ಮುಸ್ಲಿಂ ಸೌಹಾರ್ದ ಸಮಿತಿ ನೀಡಿರುವ ಹೊರೆಕಾಣಿಕೆ ಸಮರ್ಪಣೆಯ ಪತ್ರಿಕಾಗಿಷ್ಟಿಗೂ ಪರ್ಯಾಯ ಸ್ವಾಗತ ಸಮಿತಿಗೂ ಯಾವುದೇ ಸಂಬಂಧವಿಲ್ಲ.
ಮುಸ್ಲಿಂ ಸೌಹಾರ್ದ ಸಮಿತಿ ಮೂಲಕ ಪರ್ಯಾಯ ಹೊರೆಕಾಣಿಕೆ ಸಮರ್ಪಣೆ, ನೀರಿನ ಬಾಟಲ್ ವಿತರಣೆ ಬಗ್ಗೆ ಏಕಾಏಕಿಯಾಗಿ ಪತ್ರಿಕಾಗೋಷ್ಟಿ ನಡೆಸಿ, ಹೊರೆಕಾಣಿಕೆ ಮೆರವಣಿಗೆಯಲ್ಲಿ ದಫ್ ನಡೆಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದೆ.
ಪರ್ಯಾಯ ಸ್ವಾಗತ ಸಮಿತಿಯ ಅನುಮತಿ ಪಡೆಯದೆ ಮುಸ್ಲಿಂ ಸೌಹಾರ್ದ ಸಮಿತಿ ಏಕಪಕ್ಷೀಯವಾಗಿ ಇಂತಹ ಸೂಕ್ಷ್ಮ ವಿಚಾರಗಳನ್ನು ಸೃಷ್ಟಿಸಿ ಪರ್ಯಾಯ ಸಂದರ್ಬದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಬಾರದಾಗಿ ಯಶ್ ಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.













