ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ವರ್ಗಾವಣೆ
ಕುಂದಾಪುರ: ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ರಶ್ಮಿ ಎಸ್.ಆರ್. ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಶ್ಮಿ ಅವರನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ (ಬೆಸ್ಕಾಂ) ಪ್ರಧಾನ ವ್ಯವಸ್ಥಾಪಕರಾಗಿ ನೇಮಕ ಮಾಡಲಾಗಿದೆ.
2014ನೇ ಬ್ಯಾಚ್ನ ಕೆಎಎಸ್ ಅಧಿಕಾರಿಯಾಗಿರುವ ರಶ್ಮಿ ಎಸ್.ಆರ್. ಅವರು 2017ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿದ್ದರು. ಬಳಿಕ 2019ರಲ್ಲಿ ಬಂಟ್ವಾಳ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು.
2023ರಲ್ಲಿ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡಿದ್ದ ಅವರು, 2024ರ ಜುಲೈನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ನಂತರ ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅವರು, 2025ರಲ್ಲಿ ” ಮತ್ತೆ ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದರು.
ಇದೀಗ ರಾಜ್ಯ ಸರ್ಕಾರದ ಆದೇಶದಂತೆ ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕರಾಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಕುಂದಾಪುರದ ನೂತನ ಉಪವಿಭಾಗಾಧಿಕಾರಿಯಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಇದರ ವಿಶೇಷ ಭೂಸ್ವಾಧೀನಾಧಿಕಾರಿ ಮಹೇಶ್ ಪಿ.ಎಸ್. ಅವರನ್ನು ನಿಯುಕ್ತಿಗೊಳಿಸಲಾಗಿದೆ













