ಉಡುಪಿ: ಅದ್ದೂರಿಯಾಗಿ ನಡೆದ ಶೀರೂರು ಪರ್ಯಾಯ ಮಹೋತ್ಸವದ ಶೋಭಯಾತ್ರೆ
ಉಡುಪಿ: ಶೀರೂರು ಶ್ರೀಗಳ ಪರ್ಯಾಯ ಮಹೋತ್ಸವದ ಭವ್ಯ ಶೋಭಾ ಯಾತ್ರೆ ಭಾನುವಾರ ಬೆಳಗಿನ ಜಾವ ವಿಜೃಂಭಣೆಯಿಂದ ಜರುಗುವುದರೊಂದಿಗೆ ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾದರು.

ಕಾಪು ದಂಡತೀರ್ಥದಲ್ಲಿ ಮಧ್ಯರಾತ್ರಿ ಸ್ನಾನ ಮುಗಿಸಿದ ಯತಿಗಳು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ 2:30ಕ್ಕೆ ಸರಿಯಾಗಿ ಜೋಡುಕಟ್ಟೆಗೆ ಆಗಮಿಸಿದರು. ಬಳಿಕ ವೈಭವದ ಮೆರವಣಿಗೆ ಆರಂಭಗೊಂಡು ಕೋರ್ಟ್ ರಸ್ತೆ, ಹಳೆ ಡಯನಾ ಸರ್ಕಲ್, ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಸಾಗಿ ಬಂತು.
ಆಕರ್ಷಕ ಸ್ತಬ್ದ ಚಿತ್ರಗಳು:
ಮೆರವಣಿಗೆಯಲ್ಲಿ ಸಾಗಿದ ಜನಪದ ಕಲಾ ಪ್ರಕಾರಗಳು, ಸ್ತಬ್ಧಚಿತ್ರಗಳು, ಚೆಂಡೆಯ ನಾದ ಮೆರವಣಿಗೆಯ ಅಂದ ಹೆಚ್ಚಿಸಿದವು. ಚೆಂಡೆ ಬಳಗ, ಕುಣಿತ ಭಜನೆ, ಗೊರವರ ಕುಣಿತ, ಕೊಂಬು ಕಹಳೆ, ಪುಟಾಣಿಗಳಿಂದ ಮರಕಾಲು ಕುಣಿತ, ಕಂಗೀಲು ನೃತ್ಯ, ನಾಸಿಕ್ ಬ್ಯಾಂಡ್, ಗೊಂಬೆ ನೃತ್ಯ ಸಹಿತ ವಿವಿಧ ತಂಡಗಳು ಭಾಗಿಯಾಗಿದ್ದವು. ನೂರಾರು ಟ್ಯಾಬ್ಲೋ, ಕಲಾತಂಡಗಳ ಬಳಿಕ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೇರಿದಂತೆ ಅಷ್ಟಮಠಗಳ ಯತಿಗಳು ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ಸಾಗಿದರು.
ಮೆರವಣಿಗೆಯಲ್ಲಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ!
ಕೆಲ ವರ್ಷಗಳ ಹಿಂದೆ ಲಿಂಗೈಕ್ಯರಾದ ಶೀರೂರು ಮಠದ ಹಿರಿಯ ಸ್ವಾಮೀಜಿ ಲಕ್ಷ್ಮೀವರ ತೀರ್ಥರ ಮೂರ್ತಿ ತೆರೆದ ವಾಹನದಲ್ಲಿ ಸಾಗಿ ಬಂದಿರುವುದು ವಿಶೇಷವಾಗಿತ್ತು.
ಭಾನುವಾರ ಮುಂಜಾನೆ ಸುಮಾರು 2:30 ಕ್ಕೆ ಜೋಡುಕಟ್ಟೆಯಿಂದ ಆರಂಭಗೊಂಡ ಮೆರವಣಿಗೆ ಸುಮಾರು ಎರಡು ಕಿ.ಮೀ ಸಾಗಿ ರಥಬೀದಿಯಲ್ಲಿ ಸಂಪನ್ನಗೊಂಡಿತು.
ಉಡುಪಿ ಸಹಿತ ನಾಡಿನ ಮೂಲೆಮೂಲೆಯ ಭಕ್ತರು ಪರ್ಯಾಯದ ಅದ್ದೂರಿ ಮತ್ತು ವೈಭವಕ್ಕೆ ಸಾಕ್ಷಿಯಾದರು. ಮುಂಜಾನೆ ಪರ್ಯಾಯದ ಮೆರವಣಿಗೆಗಾಗಿ ರಸ್ತೆಯ ಇಕ್ಕೆಲಗಳಲ್ಲಿ, ಬೃಹತ್ ಕಟ್ಟಡಗಳ ಮಾಳಿಗೆಗಳಲ್ಲಿ, ಕಾಂಪೌಂಡ್ ಗೋಡೆಗಳ ಮೇಲೆ ಕುಳಿತುಕೊಂಡು ಜನರು ಮೆರವಣಿಗೆ ವೀಕ್ಷಿಸಿದರು. ಉಡುಪಿಗೆ ಉಡುಪಿಯೇ ಎಚ್ಚರದಿಂದ ಇದ್ದು ವೈಭವದ ಪರ್ಯಾಯ ಮೆರವಣಿಗೆಯ ಸೊಬಗನ್ನು ಕಣ್ತುಂಬಿಕೊಂಡಿತು.
ಮೆರವಣಿಗೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ರಘುಪತಿ ಭಟ್, ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ವೀಣಾ ಶೆಟ್ಟಿ, ನಯನ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ನೇತೃತ್ವದ ಪೊಲೀಸರ ತಂಡ ಬಿಗು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತು.












