ಉಡುಪಿ ವಲಯ ಮಟ್ಟದ ಕ್ರೈಸ್ತ ಐಕ್ಯತಾ ಸಪ್ತಾಹದ ಪ್ರಾರ್ಥನಾ ಸಭೆ
ಉಡುಪಿ: ನಮ್ಮ ವೈಯುಕ್ತಿಕ ಸಿದ್ದಾಂತಗಳನ್ನು ಬದಿಗಿರಿಸಿ ಪ್ರತಿಯೊಬ್ಬ ವ್ಯಕ್ತಿ ನಮ್ಮವರು ಎಂಬ ಭಾವನೆಯಲ್ಲಿ ಕಂಡಾಗ ದೇಶದಲ್ಲಿ ಐಕ್ಯತೆಯನ್ನು ಕಾಣಲು ಸಾಧ್ಯ ಎಂದು ತೀರ್ಥಹಳ್ಳಿ ಚರ್ಚಿನ ಧರ್ಮಗುರು ವಂ|ವಿರೇಶ್ ಮೋರಾಸ್ ಅಭಿಪ್ರಾಯಪಟ್ಟರು.

ಅವರು ಸೋಮವಾರ ಸಂಜೆ ಶೋಕಮಾತಾ ದೇವಾಲಯದಲ್ಲಿ ಉಡುಪಿ ವಲಯ ಮಟ್ಟದ ಕ್ರೈಸ್ತ ಐಕ್ಯತಾ ಸಪ್ತಾಹದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಸಂದೇಶ ನೀಡಿದರು.
ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟ ಎಂದು ಕವಿಗಳು ಹಾಡಿ ಹೊಗಳಿದ್ದು ಅದರಂತೆ ಬಾಳಲು ಪ್ರತಿಯೊಬ್ಬರು ಒಗ್ಗಟ್ಟಿನಿಂದ ಬದುಕಿದಾಗ ಮಾತ್ರ ಸಾಧ್ಯವಾಗುತ್ತದೆ. ವಿವಿಧ ಕ್ರೈಸ್ತ ಸಭೆಗಳು ಒಂದಾಗಿ ದೇಶದಲ್ಲಿನ ಸಮಸ್ಯೆಗಳಿಗೆ ದನಿ ಎತ್ತುವ ಕಾರ್ಯ ನಡೆಯಬೇಕು ಈ ಮೂಲಕ ನಾವೆಲ್ಲರೂ ಕೂಡ ಒಂದೇ ಎನ್ನುವ ಭಾವನೆಯನ್ನು ಮೂಡಿಸಲು ಸಾಧ್ಯವಿದೆ ಎಂದರು.
ಐಕ್ಯತಾ ಸಭೆಯ ನೇತೃತ್ವ ವಹಿಸಿದ್ದ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ ಪರರ ಕಷ್ಟ ಸಂಕಷ್ಟಗಳಿಗೆ ನಾವು ಸ್ಪಂದಿಸುವುದರ ಮೂಲಕ ಐಕ್ಯತಾ ಮನೋಭಾವವನ್ನು ವೃದ್ಧಿಗೊಳಿಸಬೇಕು. ಪರರ ನೋವಿಗೆ ದನಿಯಾದಾಗ ಅವರಲ್ಲಿ ಪರಮಾತ್ಮನನ್ನು ಕಾಣಲು ಸಾಧ್ಯವಿದೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಜೊತೆಯಾಗಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಸಿಎಸ್ ಐ ಸದರ್ನ್ ಡಯಾಸಿಸ್ ಧರ್ಮಾಧ್ಯಕ್ಷರಾದ ವಂ|ಹೇಮಚಂದ್ರ ಕುಮಾರ್ ಮಾತನಾಡಿ ಐಕ್ಯತಾ ಸಪ್ತಾಹ ಕ್ರೈಸ್ತ ಸಭೆಗಳನ್ನು ಬಲಗೊಳಿಸಲು ಸಹಕಾರಿಯಾಗಲಿ ಈ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಲಿ ಎಂದರು.
ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ಡೆನಿಸ್ ಡೆಸಾ, ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟೀಫನ್ ಡಿಸೋಜಾ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಸಿಎಸ್ ಐ ಸಭೆಯ ವಂ| ಕಿಶೋರ್, ವಂ| ಸಂತೋಷ್, ರೋಮನ್ ಕ್ಯಾಥೊಲಿಕ್, ಸಿಎಸ್ ಐ, ಸಿರೋಮಲಬಾರ್, ಸಹಿತ ವಿವಿಧ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡಿದ್ದರು.
ಯುನಾಯ್ಟೆಡ್ ಕ್ರಿಶ್ಚಿಯನ್ ಫೋರಂ ಇದರ ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಸ್ವಾಗತಿಸಿ, ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಐಕ್ಯತಾ ಆಯೋಗದ ನಿರ್ದೇಶಕರಾದ ವಂ|ಲಿಯೊ ಪ್ರವೀಣ್ ಡಿಸೋಜಾ ವಂದಿಸಿದರು.












