ಸುರತ್ಕಲ್ ಪೊಲೀಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೈದ ಸೋಮನಾಥ ಮನೆಗೆ ಯಶ್ಪಾಲ್ ಸುವರ್ಣ ಭೇಟಿ
ಸುರತ್ಕಲ್: ಹೊಸಬೆಟ್ಟಿನಲ್ಲಿ ಪೊಲೀಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಮೀನುಗಾರ ಸೋಮನಾಥ ಮನೆಗೆ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ಯವರೊಂದಿಗೆ ಉಡುಪಿ ಶಾಸಕರಾದ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಅಕ್ಟೋಬರ್ 25ರಂದು ಬೀಚ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವ ಜೋಡಿಯನ್ನು ಪ್ರಶ್ನಿಸಿದ್ದ ಬಗ್ಗೆ ಸೋಮನಾಥ ವಿರುದ್ಧ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರ ತನಿಖೆ ನೆಪದಲ್ಲಿ ಕಿರುಕುಳದಿಂದ ಬೇಸತ್ತು ಸೋಮನಾಥ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸ್ ಇಲಾಖೆ ದೂರು ನೀಡಿದ ಯುವ ಜೋಡಿಯನ್ನು ವಿಚಾರಣೆ ನಡೆಸಿ ವಿರುದ್ಧ ಕೇಸು ದಾಖಲಿಸಬೇಕು. ವಿಚಾರಣೆಯ ನೆಪದಲ್ಲಿ ಸೋಮನಾಥ ರವರಿಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು.
ಮೃತ ಸೋಮನಾಥ ಕುಟುಂಬಕ್ಕೆ ಪರಿಹಾರ ನೀಡಿ, ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಎಂದು ಅಗ್ರಹಿಸಿದ್ದಾರೆ.
ಸಮುದ್ರ ತೀರದಲ್ಲಿ ಪ್ರವಾಸಿಗರಿಗೆ ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಜೀವದ ಹಂಗು ತೊರೆದು ರಕ್ಷಣೆಗೆ ಧಾವಿಸುವ , ಪೊಲೀಸ್ ಇಲಾಖೆಗೆಗೆ ಸದಾ ಸಹಕಾರ ನೀಡುವ ಮೀನುಗಾರರಿಗೆ ಇಂತಹ ಘಟನೆಯ ಮೂಲಕ ಮಾನಸಿಕ ಸ್ಥೈರ್ಯ ಕುಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ಪ್ರಕರಣದಲ್ಲಿ ಪೊಲೀಸರು ವ್ಯಕ್ತಿಯ ಹಿನ್ನೆಲೆ, ಪೂರ್ವಾಪರಗಳ ಬಗ್ಗೆ ತಿಳಿದುಕೊಂಡು ಘಟನೆಯ ಎರಡು ಕಡೆ ವ್ಯಕ್ತಿಗಳ ವಿಚಾರಣೆಯನ್ನು ನಡೆಸಿ ಕ್ರಮ ಕೈಗೊಳ್ಳಬೇಕು. ಪ್ರವಾಸಿಗರ ದೂರನ್ನು ಏಕಪಕ್ಷೀಯವಾಗಿ ಪರಿಗಣಿಸಿ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೇ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿ ಕ್ರಮ ಕೈಗೊಂಡಾಗ ಇಂತಹ ಅಹಿತಕರ ಘಟನೆಗೆ ಅವಕಾಶ ನೀಡಿದಂತಾಗುತ್ತದೆ, ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ಯಶ್ ಪಾಲ್ ಸುವರ್ಣ ಹೇಳಿದರು.
ಈ ಸಂದರ್ಭದಲ್ಲಿ , ದಕ್ಷಿಣ ಕನ್ನಡ ಬಿಜೆಪಿ ಮೀನುಗಾರ ಪ್ರಕೋಷ್ಟದ ಗಿರೀಶ್ ತಣ್ಣೀರುಬಾವಿ, ಉಡುಪಿ ಜಿಲ್ಲಾ ಬಿಜೆಪಿ ಮೀನುಗಾರ ಪ್ರಕೋಷ್ಟದ ಶರತ್ ಕೋಟ್ಯಾನ್ ಬೈಲಕರೆ, ಮಾಜಿ ಕಾರ್ಪೊರೇಟರ್ ನಯನ, ರಾಜೇಶ್ ಬೈಕಂಪಾಡಿ, ಸ್ಥಳೀಯ ಮುಖಂಡರಾದ ಸುಧೀರ್ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.













