ಅಕ್ಷತಾ ಪೂಜಾರಿಗೆ ಹಲ್ಲೆ ನಡೆಸಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಿ : ಯಶ್ಪಾಲ್ ಸುವರ್ಣ ಆಗ್ರಹ
ಉಡುಪಿ: ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ ಬೆಳಗ್ಗೆ 4.30 ರ ಸುಮಾರಿಗೆ ನುಗ್ಗಿ ಯುವತಿಗೆ ಹಲ್ಲೆ ನಡೆಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿರುವ ಆರೋಪಿಯ ಚಿಕ್ಕಮ್ಮನ ಮನೆಗೆ ಮಹಿಳಾ ಪೋಲಿಸರು ಇಲ್ಲದೇ,ಕೇವಲ ಪುರುಷ ಪೋಲಿಸರು ನುಗ್ಗಿ, ಅಕ್ಷತಾ ಪೂಜಾರಿ ಎಂಬ ಮುಗ್ದ ಯುವತಿಗೆ ಹಲ್ಲೆ ನಡೆಸಿದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರಿಗೆ ದೂರು ಕೊಟ್ಟಾಗ ಠಾಣಾಧಿಕಾರಿ ಆಕೆಯ ಕೇಸನ್ನು ದಾಖಲಿಸದೆ ಪೊಲೀಸರನ್ನು ರಕ್ಷಿಸುವ ಸಲುವಾಗಿ ಅಕ್ಷತಾ ಪೂಜಾರಿ ಮತ್ತು ಆಕೆಯ ತಾಯಿಯ ಮೇಲೆ ಕರ್ತವ್ಯಕ್ಕೆ ಅಡ್ಡಿ ಎಂಬ ಸುಳ್ಳು ಕೇಸು ದಾಖಲಿಸಿರುವ ಬಗ್ಗೆ ಯುವತಿ ಆರೋಪ ಮಾಡಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕೇಸು ದಾಖಲಿಸಿ ಯುವತಿಗೆ ನ್ಯಾಯ ಒದಗಿಸುವಂತೆ ಆಗ್ರಹ ಮಾಡಿದ್ದಾರೆ.













