ಉಡುಪಿ ಉಚ್ಚಿಲ ದಸರಾ: ಅ. 2 ರ ಭವ್ಯ ಶೋಭಾಯಾತ್ರೆಗೆ ಸಕಲ ಸಿದ್ಧತೆ

Spread the love

ಉಡುಪಿ ಉಚ್ಚಿಲ ದಸರಾ: ಅ. 2 ರ ಭವ್ಯ ಶೋಭಾಯಾತ್ರೆಗೆ ಸಕಲ ಸಿದ್ಧತೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಪ್ರವರ್ತಿತ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸಾರ ಪ್ರಯುಕ್ತ ಅ. 2ರ ವಿಜಯ ದಶಮಿಯಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯುವ ಭವ್ಯ ಶೋಭಾಯಾತ್ರೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಶೋಭಾಯಾತ್ರೆ ಸುವ್ಯವಸ್ಥಿತವಾಗಿ ನಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಉಚ್ಚಿಲ ದಸರಾ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್, ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಉಪಸ್ಥಿತಿಯಲ್ಲಿ ಸಭೆ ನಡೆಸಿದೆ.

ಅಂದು ಮಧ್ಯಾಹ್ನ 12ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕ್ಷೇತ್ರದಿಂದ ಸಂಜೆ 4.30ಕ್ಕೆ ಶೋಭಾಯಾತ್ರೆ ಹೊರಟು ಎರ್ಮಾಳ್ ತನಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ, ಅಲ್ಲಿಂದ ತಿರುಗಿ ಹೆದ್ದಾರಿ ಮೂಲಕ ಉಚ್ಚಿಲ- ಮೂಳೂರು, ಕೊಪ್ಪಲಂಗಡಿವರೆಗೆ ಸಾಗಿ ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭ ಬಳಿ ದೇವರ ವಿಗ್ರಹದ ಜಲಸ್ತಂಭನ ನಡೆಯಲಿದೆ.

ಈ ಸಂದರ್ಭ ಕಾಪು ಬೀಚ್ನಲ್ಲಿ ಗಂಗಾರತಿ, ರಸಮಂಜರಿ, ಆಕರ್ಷಕ ಸುಡುಮದ್ದು ಪ್ರದರ್ಶನ, ನವದುರ್ಗೆಯರು, ಶಾರದಾ ಮಾತೆ, ಅಂಬಾರಿ ಹೊತ್ತ ಆನೆಗೆ ಡೋನ್ ಮೂಲಕ ಪುಷ್ಪಾರ್ಚನೆ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ನೂರಾರು ಮಹಿಳೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯ ಅರ್ಚಕರಿಂದ ಕಾಶಿ ಗಂಗಾ ನದಿ ತೀರದಲ್ಲಿ ನಡೆಯುವ ರೀತಿಯಲ್ಲಿ ನವದುರ್ಗೆಯರು, ಶಾರದಾ ಮಾತೆ, ಸಮುದ್ರರಾಜನಿಗೆ ಗಂಗಾರತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಜಿ. ಶಂಕರ್ ತಿಳಿಸಿದ್ದಾರೆ.

ನವರಾತ್ರಿಯ 10ನೇ ದಿನವಾದ ಬುಧವಾರ ಬೆಳಿಗ್ಗೆ ಉದಯಪೂಜೆ, ನಿತ್ಯಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಪ್ರಸಾದ ವಿತರಣೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಕಲೋಕ್ತ ಪೂಜೆ ನಡೆಯಲಿದೆ. ಶಾಲಿನಿ ಜಿ.ಶಂಕರ್ ಸಭಾಂಗಣದಲ್ಲಿ ಬೆಳಗ್ಗೆ ಭಜನಾ ಸಂಕೀರ್ತನೆ, ಮಧ್ಯಾಹ್ನ ಪ್ರಭಾಕರ ತಣ್ಣೀರುಬಾವಿ ತಂಡದಿಂದ ಭಕ್ತಿ ಗೀತಾಂಜಲಿ, ಅಕ್ಷತಾ ದೇವಾಡಿಗ ಅವರಿಂದ ಸಾಕ್ಕೊಫೋನ್ ವಾದನ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಿಯಾಲಿಟಿ ಶೋ ಖ್ಯಾತಿಯ ಯುವ ಗಾಯಕ-ಗಾಯಕಿಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು.


Spread the love
Subscribe
Notify of

0 Comments
Inline Feedbacks
View all comments