ಉಡುಪಿ: ಕೇಂದ್ರ ಸರಕಾರದ ‘ವೋಟ್ ಚೋರಿ’ ಹಗರಣದ ವಿರುದ್ದ ಕಾಂಗ್ರೆಸ್‌ನಿಂದ ಮಾನವ ಸರಪಳಿ

Spread the love

ಉಡುಪಿ: ಕೇಂದ್ರ ಸರಕಾರದ ‘ವೋಟ್ ಚೋರಿ’ ಹಗರಣದ ವಿರುದ್ದ ಕಾಂಗ್ರೆಸ್‌ನಿಂದ ಮಾನವ ಸರಪಳಿ

ಉಡುಪಿ: ಕೇಂದ್ರ ಬಿಜೆಪಿ ಸರಕಾರ ಚುನಾವಣಾ ಆಯೋಗ ದೊಂದಿಗೆ ಸೇರಿಕೊಂಡು ನಡೆಸುತ್ತಿರುವ ಮತಗಳ್ಳತನ (ವೋಟ್ ಚೋರ್) ಹಗರಣದ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾನವ ಸರಪಳಿ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಸಂವಿಧಾನದ ಪೀಠಿಕೆಗಳನ್ನು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ವಾಚಿಸಿದರು. ಕಳೆದ ಎರಡು ತಿಂಗಳಲ್ಲಿ ಸಂಗ್ರಹಿಸಲಾದ ಸುಮಾರು 1.40ಲಕ್ಷ ಸಹಿಗಳನ್ನು ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಮಣಿಪಾಲದ ಸಿಂಡಿಕೇಟ್‌ವರೆಗೆ ಸುಮಾರು ನಾಲ್ಕು ಕಿ.ಮೀ. ಉದ್ದದ ಬೃಹತ್ ’ಮಾನವ ಸರಪಳಿ’ ರಚಿಸಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಬಿಜೆಪಿ ಪಕ್ಷ ಸಂವಿಧಾನವನ್ನು ಹತ್ತಿಕ್ಕಿ ವಾಮ ಮಾರ್ಗದ ಮೂಲಕ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷ ಇದರ ವಿರುದ್ಧ ನಿರಂತರ ಹೋರಾಟ ಮಾಡಿ ಜನಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಉಪಾಧ್ಯಕ್ಷ, ಚಿಂತಕ ನಿಕೇತ್‌ರಾಜ್ ಮೌರ್ಯ ಮಾತನಾಡಿ, ಈ ದೇಶದ ತಳ ಸಮು ದಾಯದ ಪೋಷಕರು, ತಮ್ಮ ಮಕ್ಕಳು ಉದ್ಯಮಿ, ಡಾಕ್ಟರ್, ಇಂಜಿನಿಯರ್, ರಾಜಕಾರಣಿಯಾಗಬೇಕೆಂಬ ಕನಸು ಕಾಣಲು ಅವಕಾಶ ಮಾಡಿಕೊಟ್ಟಿರು ವುದು ಅಂಬೇಡ್ಕರ್ ಬರೆದ ಸಂವಿಧಾನ. ಈ ಸಂವಿಧಾನ ನಾಶವಾದರೆ ನಮ್ಮ ಕನಸು ಕೂಡ ನಾಶವಾಗುತ್ತದೆ. ಈ ಸಂವಿಧಾನ ಉಳಿದರೆ ಮಾತ್ರ ನಮ್ಮ ಕನಸು ಉಳಿಯುತ್ತದೆ. ಬಿಜೆಪಿ ಈ ಸಂವಿಧಾನವನ್ನು ನಾಶ ಮಾಡಲು ಸುಲಭ ತಂತ್ರವನ್ನು ಕಂಡುಕೊಂಡಿದೆ. ಜಾತಿಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಮಾತನಾಡಿ, ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಇಂದು ಧಕ್ಕೆ ಬರುತ್ತಿದೆ. ಕೇಂದ್ರ ಸರಕಾರ ಸಂವಿಧಾನದ ಎಲ್ಲ ಆಶಯಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಮಾಡುತ್ತಿವೆ. ಸತತವಾಗಿ ಸಂವಿಧಾನ ಬದ್ಧವಾದ ಎಲ್ಲ ಅಸ್ತ್ರಗಳನ್ನು ಶಿಥಿಲಗೊಳಿಸಲಾಗುತ್ತಿದೆ. ಈ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ಹಾಕುತ್ತಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಸಂವಿಧಾನಕ್ಕೆ ಧಕ್ಕೆ ಬಂದಾಗ ಕಾಂಗ್ರೆಸ್ ಪಕ್ಷ ಹೋರಾಟಕ್ಕೆ ಇಳಿಯುತ್ತದೆ. ಈ ದೇಶದ ಸಂವಿಧಾನವನ್ನು ರಕ್ಷಣೆ ಮಾಡುವ ಏಕೈಕ ಪಕ್ಷ ಕಾಂಗ್ರೆಸ್. ಬಿಜೆಪಿ ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಮತದಾನದ ಹಕ್ಕನ್ನು ಕಸಿಯುವ ಕೆಲಸ ಮಾಡುತ್ತಿದೆ. ಇದರೊಂದಿಗೆ ಸಂವಿಧಾನದ ಆಶಯವನ್ನು ಬುಡಮೇಲು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸುಮ್ಮನೆ ಕೂರಲು ಆಗುವುದಿಲ್ಲ. ಬೀದಿಗೆ ಬಂದು ಹೋರಾಟ ಇನ್ನಷ್ಟು ತೀವ್ರಗೊಳಿಸ ಲಾಗುವುದು. ಯಾವುದೇ ತ್ಯಾಗಕ್ಕೂ ನಾವು ಸಿದ್ಧ ಎಂದರು.

ಈ ಸಂದರ್ಭದಲ್ಲಿ ಹಿರಿಯ ಚಿಂತಕ ಪ್ರೊ.ಫಣಿರಾಜ್, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಉಡುಪಿ ನಗರಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಸೋನಿಯಾ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಓಟ್ ಚೋರಿ ಅಭಿಯಾನದ ಸಂಯೋಜಕ ಹರಿಪ್ರಸಾದ್ ರೈ, ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ಕೃಷ್ಣ ಶೆಟ್ಟಿ, ವರೋನಿಕಾ ಕರ್ನೆಲಿಯೋ, ಜ್ಯೋತಿ ಹೆಬ್ಬಾರ್, ರಾಜು ಪೂಜಾರಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳವಳ್ಳಿ, ರಾಘವೇಂದ್ರ ಶೆಟ್ಟಿ ಕರ್ಜೆ, ವೈ.ಸುಕುಮಾರ್, ಗೋಪಿನಾಥ್ ಭಟ್, ಶುಭೋದ್ ರಾವ್, ಸಂತೋಷ್ ಕುಲಾಲು, ಪ್ರದೀಪ್ ಕುಮಾರ್, ಶೆಟ್ಟಿ, ಅರವಿಂದ ಪೂಜಾರಿ, ಶಂಕರ್ ಕುಂದರ್, ಹರಿಪ್ರಸಾದ್ ಶೆಟ್ಟಿ, ದಿನೇಶ್ ಪುತ್ರನ್, ಭಾಸ್ಕರ ರಾವ್ ಕಿದಿಯೂರು ಶಬ್ಬಿರ್ ಅಹ್ಮದ್ ರೊಶನಿ ಒಲಿವರಾ, ಶರ್ಪುದ್ದೀನ್ ಶೇಖ್, ಇಸ್ಮಾಯಿಲ್ ಆತ್ರಾಡಿ, ಅಝೀಝ್ ಹೆಜಮಾಡಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments