ಉಡುಪಿ ಜಿಲ್ಲಾ ಕಾಂಗ್ರೆಸ್ ನೀತಿ, ಸಂಶೋಧನೆ, ತರಬೇತಿ ವಿಭಾಗ ಅಧ್ಯಕ್ಷರಾಗಿ ಡಾ. ಗಣನಾಥ ಎಕ್ಕಾರು ನೇಮಕ
ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ, ಸಂಶೋಧನೆ ಹಾಗೂ ತರಬೇತಿ ವಿಭಾಗಕ್ಕೆ ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಡಾ. ಗಣನಾಥ ಎಕ್ಕಾರು ರವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರ ಆದೇಶಾನುಸಾರ ರಾಜ್ಯಾಧ್ಯಕ್ಷ ರಘು ದೊಡ್ಡೇರಿ ಅವರು ಆದೇಶ ಪತ್ರ ನೀಡಿದ್ದು ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ಕೆಪಿಸಿಸಿಯ ಮಾರ್ಗದರ್ಶನದಲ್ಲಿ ರಾಜ್ಯ ಮತ್ತು ಸ್ಥಳಿಯ ನಾಯಕರ ಸಹಕಾರದೊಂದಿಗೆ ನೀತಿ, ಸಂಶೋಧನೆ ಹಾಗೂ ತರಬೇತಿ ವಿಭಾಗದ ಸಂಘಟನೆ ಬಲಪಡಿಸಲು ಮತ್ತು ಆ ಮೂಲಕ ಪಕ್ಷದ ಬಲವರ್ಧನೆಯಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಿದ್ದಾರೆ
ಡಾ. ಗಣನಾಥ ಎಕ್ಕಾರು- ಸಂಕ್ಷಿಪ್ತ ಪರಿಚಯ
ಡಾ. ಗಣನಾಥ ಎಕ್ಕಾರು ಇವರು ಮಂಗಳೂರು ತಾಲ್ಲೂಕಿನ ಎಕ್ಕಾರಿನಲ್ಲಿ ಜೂನ್ 2. 1962 ರಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಕಟೀಲಿನಲ್ಲಿ ಮುಗಿಸಿ, ಪದವಿ ಪೂರ್ವ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜ್ ಮತ್ತು ಪದವಿ ಶಿಕ್ಷಣವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮುಗಿಸಿದರು. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪ್ರಥಮ ಬ್ಯಾಂಕು ಚಿನ್ನದ ಪದಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾ. ಕೆ. ಚಿನ್ನಪ್ಪ ಗೌಡರ ಮಾರ್ಗದರ್ಶನದಲ್ಲಿ ‘ತುಳುನಾಡಿನ ಜನಪದ ಆಟಗಳು’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ವ್ಯಕ್ತಿ ವಿಕಸನದಲ್ಲಿ ಡಿಪ್ಲೋಮ ಪದವಿ ಪಡೆದಿದ್ದಾರೆ. ಲೇಖಕಿ, ಪ್ರಾಂಶುಪಾಲೆ ಡಾ. ನಿಕೇತನ ಅವರ ಪತ್ನಿ. ಆಳ್ವಾಸ್ ನುಡಿಸಿರಿ ವಿದ್ಯಾರ್ಥಿ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಕುಮಾರಿ ಶಾಲಿಕ ಪುತ್ರಿ.
10 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತುಳುನಾಡಿನ ಜನಪದ ಆಟಗಳು, ಕೆಸ್ತೂರು ದೊಡ್ಡಣ್ಣ ಶೆಟ್ರ ಸಮಗ್ರ ಕಾವ್ಯ(ಸಂ), ಜನಪದ ಆಟಗಳು, ಕು.ಶಿ.ಹರಿದಾಸ ಭಟ್ಟ ಜೀವನ ಸಾಧನೆ, ಸಹಕಾರಿ ಬೀಷ್ಮ ಮೊಳಹಳ್ಳಿ ಶಿವರಾಯರು, ಜಾನಪದ ತಜ್ಞ ಬನ್ನಂಜೆ ಬಾಬು ಅಮೀನ್, ಮಾಮಿ ಮರ್ಮಲ್, ಮದಿಪು ಲೇಖನಗಳು, ಸಾಹಿತ್ಯಲಹರಿ, ಲೋಕ ಚಿಂತಕರು(ಸಂ) ಅವರ ಪ್ರಕಟಿತ ಮುಖ್ಯ ಕೃತಿಗಳು, ಅವರು ಪತ್ರಿಕೆಯಲ್ಲಿ ಬರೆದ ಸಂಸ್ಕೃತಿ ಲಹರಿ ಎಂಬ ಅಂಕಣ ಬರಹವು ಪ್ರಸಿದ್ಧವಾಗಿದೆ. ತರಂಗ ವಾರ ಪತ್ರಿಕೆಯಲ್ಲಿ ಅವರು ಬರೆದ ಗ್ರಾಮೀಣ ಆಟಗಳು, ಲೇಖನಗಳು ಗ್ರಾಮೀಣ ಆಟಗಳ ಬಗ್ಗೆ ಹೊಸ ಒಳನೋಟಗಳನ್ನು ನೀಡಿದೆ. ನೂರಕ್ಕೂ ಹೆಚ್ಚು ಜಾನಪದ, ಸಂಸ್ಕೃತಿ ಮತ್ತು ಸಾಹಿತ್ಯ ಅಧ್ಯಯನಕ್ಕೆ ಸಂಬಂಧಿಸಿದ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ‘ರಾಶಿ’ ಜಾನಪದ ಪತ್ರಿಕೆಯ ಸಂಪಾದಕರಾಗಿ 6 ವರ್ಷ ಮತ್ತು ಮದಿಪು ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ 3 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ನಾಡಿನ ಪ್ರಸಿದ್ಧ ಜಾನಪದ ಮತ್ತು ಸಾಹಿತ್ಯ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಅವರ ಭಾಷಣ ಮತ್ತು ಸಂದರ್ಶನಗಳು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರವಾಗಿದೆ.
ಸಾಹಿತ್ಯ ಸಂಘಟನೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿಯಲ್ಲಿ ನಡೆದ 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹಲವು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕರಾಗಿ ಸಂಘದ ಅಧ್ಯಕ್ಷರಾಗಿದ್ದರು. ರಾಜ್ಯ ಮಟ್ಟದ ಶೈಕ್ಷಣಿಕ ಸಮಿತಿಗಳಲ್ಲಿ ಸದಸ್ಯರಾಗಿದ್ದರು. ಹಲವು ಪ್ರಶಸ್ತಿ ಆಯ್ಕೆ ಸಮಿತಿಗಳ ಜಿಲ್ಲಾ ಮಟ್ಟದ ಸದಸ್ಯರಾಗಿದ್ದಾರೆ. 2005-08ನೆ ಸಾಲಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಕರ್ನಾಟಕ ಸರಕಾರದಿಂದ ನೇಮಕಗೊಂಡು ಸಕೀಯ ಸದಸ್ಯರಾಗಿದ್ದರು. ಹಲವಾರು ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಶಿಬಿರಗಳಲ್ಲಿ ಅಧಿಕಾರಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಕಳೆದ 3 ದಶಕಗಳಿಂದ ಕಾಲೇಜು ಶಿಕ್ಷಣ ಇಲಾಖೆಯ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸಹ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ನೋಡಲ್ ಅಧಿಕಾರಿಯಾಗಿ ಮತ್ತು ಸಂಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್.ಎಸ್.ಎಸ್ ಕೋಶದಲ್ಲಿ ರಾಜ್ಯ ಸಂಪರ್ಕಾಧಿಕಾರಿ ಮತ್ತು ಸರ್ಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಅವರಿಗೆ ಹಲವಾರು ಪ್ರಶಸ್ತಿ- ಗೌರವಗಳು ಅರ್ಹವಾಗಿಯೇ ಸಂದಿವೆ. ಮುಂಬಯಿ ವಿಶ್ವವಿದ್ಯಾನಿಲಯದಿಂದ ದಿ। ವರದರಾಜ ಅದ್ಯ ಚಿನ್ನದ ಪದಕ. 1992ರಲ್ಲಿ ಮಂಗಳೂರಿನ ವ್ಯಕ್ತಿ ವಿಕಸನ ಸಂಸ್ಥೆಯಿಂದ ವ್ಯಕ್ತಿ ವಿಕಸನ ಪ್ರಶಸ್ತಿ, 2000ನೇ ವರ್ಷದಲ್ಲಿ ಅವರ ಸಂಶೋಧನೆ ‘ತುಳುನಾಡಿನ ಜನಪದ ಆಟಗಳು’ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ ಲಭಿಸಿದೆ. ಮಂಗಳೂರಿನ ಹೇಮಾಂಶು ಪ್ರಕಾಶನದಿಂದ ಸಾಹಿತ್ಯ ದಂಪತಿ ಪ್ರಶಸ್ತಿ, ರಾಜ್ಯ ಮಟ್ಟದ ಬೆಳಂದಿಗಳ ಸಾಹಿತ್ಯ ಸಮ್ಮೇಳನದಲ್ಲಿ ದಂಪತಿ ಪ್ರಶಸ್ತಿ, ರಾಜ್ಯ ಶೈಕ್ಷಣಿಕ ಪ್ರಸಾರ ಸಂಸ್ಥೆಯಿಂದ ಅತ್ಯುತ್ತಮ ಕನ್ನಡ ಉಪನ್ಯಾಸಕ ಪ್ರಶಸ್ತಿ, ಕುವೆಂಪು ವಿಶ್ವ ಮಾನವ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1997-98ನೇ ಸಾಲಿನಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯದ ಅತ್ಯುತ್ತಮ ಎನ್.ಎಸ್.ಎಸ್. ಯೋಜನಾಧಿಕಾರಿ ರಾಜ್ಯ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಬೆಳ್ಳಿಹಬ್ಬದ ಪುರಸ್ಕಾರ, ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಫೋರ್ಡ್ ಪೌಂಡೇಶನ್ನ ಅಧ್ಯಯನ ಪೆಲೋಶಿಫ್, 2010-11ನೆ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ರಾಜ್ಯದ ಅತ್ಯುತ್ತಮ ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿಯೊಂದಿಗೆ ಡಾ. ಗಣನಾಥ ಎಕ್ಕಾರು ಅವರಿಗೆ ರಾಜ್ಯದ ಅತ್ಯುತ್ತಮ ಸಂಯೋಜನಾಧಿಕಾರಿ ಪ್ರಶಸ್ತಿಯನ್ನು ಘನತೆವೆತ್ತ ರಾಜ್ಯಪಾಲರಾದ ಶ್ರೀ ಹಂಸರಾಜ ಬಾರಧ್ವಾಜ್ ಅವರು ಘನ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನೀಡಿದ್ದಾರೆ.
2013-14ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮೊದಲ ಬಾರಿಗೆ ದೇಶದ ಅತ್ಯುತ್ತಮ ಎನ್.ಎಸ್.ಎಸ್. ವಿಶ್ವವಿದ್ಯಾನಿಲಯ ಪ್ರಶಸ್ತಿಯೊಂದಿಗೆ ಡಾ. ಗಣನಾಥ ಎಕ್ಕಾರು ರವರು ದೇಶದ ಅತ್ಯುತ್ತಮ ಎನ್.ಎಸ್.ಎಸ್ ಸಂಯೋಜನಾಧಿಕಾರಿ ರಾಷ್ಟ್ರ ಪ್ರಶಸ್ತಿಯನ್ನು ಘನತೆವೆತ್ತ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿಯವರಿಂದ ಪಡೆದಿದ್ದಾರೆ.
ಸಾಹಿತ್ಯ, ಜಾನಪದ, ಸಂಘಟನೆ. ಸಮಾಜ ಸೇವೆ, ಶಿಕ್ಷಣ-ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅನುಭವ ಮತ್ತು ಸೇವೆ ಸಲ್ಲಿಸಿದ ವ್ಯಕ್ತಿತ್ವ ಅವರದ್ದು.