ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ – ಕೆ. ವಿಕಾಸ್ ಹೆಗ್ಡೆ
ಬಾಯಿ ತೆರೆದರೆ ಧರ್ಮ, ದೇಶ, ಹಿಂದುತ್ವದ ಬಗ್ಗೆ ಭಾಷಣ ಮಾಡುವ, ಹೇಳಿಕೆಗಳನ್ನು ನೀಡುವ ಬಿಜೆಪಿ ನಾಯಕರುಗಳು ಅವರ ಪಕ್ಷದ ಉಡುಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರ ಮಾಲಕತ್ವದ ರೆಸಾರ್ಟ್ ಒಂದರಲ್ಲಿ ಅಕ್ರಮ ವಿದೇಶಿಗರು ನೆಲೆಸಿರುವ ಬಗ್ಗೆ ಏನು ಉತ್ತರ ನೀಡುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಪ್ರಶ್ನೆ ಮಾಡಿದ್ದಾರೆ.
ವಿದೇಶಿಯರನ್ನು ಉದ್ಯೋಗ, ವಸತಿ ನೀಡುವಾಗ ಸಂಬಂಧ ಪಟ್ಟ ಇಲಾಖೆಗಳಿಗೆ ಸೂಕ್ತ ದಾಖಲೆಗಳನ್ನು ನೀಡದೆ ಅವರಿಗೆ ಉದ್ಯೋಗ ನೀಡುವುದು, ವಾಸ್ತವ್ಯ ನೀಡುವುದು ಕಾನೂನು ಬಾಹಿರ ಕ್ರಮ ಹಾಗೂ ಸಂವಿಧಾನ ವಿರೋಧಿ ಕ್ರಮಕೂಡ ಹೌದು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಗೋ ರಕ್ಷಣೆ, ಧರ್ಮ ರಕ್ಷಣೆ, ರಾಷ್ಟ್ರ ರಕ್ಷಣೆ ಬಗ್ಗೆ ಹೇಳಿಕೆ, ಭಾಷಣ, ಧರಣಿಗಳನ್ನು ಮಾಡುವವರು ಇವತ್ತು ತಮ್ಮ ರೆಸಾರ್ಟ್ ನಲ್ಲಿ ಅಕ್ರಮ ವಿದೇಶಿಯರನ್ನು ಇಟ್ಟುಕೊಂಡ ಬಗ್ಗೆ ಏನು ಉತ್ತರ ನೀಡುತ್ತಾರೆ. ಹಾಗೂ ಇದೊಂದು ರಾಷ್ಟ್ರ ವಿರೋಧಿ ಗಂಭೀರ ಪ್ರಕರಣವಾಗಿದ್ದು ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಬೇಕು ಹಾಗೂ ಇದೊಂದು ಅತ್ಯಂತ ಗಂಭೀರ ಪ್ರಕರಣವಾದುದರಿಂದ ಇದನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹ ಪಡಿಸಿದ್ದಾರೆ.













