ಉಡುಪಿಯಲ್ಲಿ ಕೊರೋನಾ ಲಕ್ಷಣಗಳಿಂದ ಬಳಲುತ್ತಿದ್ದ ವ್ಯಕ್ತಿ ಸಾವು – ಗಂಟಲ ದ್ರವ ಪರೀಕ್ಷೆಗೆ
ಉಡುಪಿ: ಕಳೆದ ಮೂರು ದಿನದಿಂದ ಶೀತ, ಕೆಮ್ಮು ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಉಡುಪಿಯಲ್ಲಿ ಭಾನುವಾರ ಮೃತಪಟ್ಟಿದ್ದು ಕೋವಿಡ್ ಲಕ್ಷಣಗಳ ಹಿನ್ನಲೆಯಲ್ಲಿ ಅವರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.
ಉಡುಪಿ ನಗರದ ಬನ್ನಂಜೆ ವಾರ್ಡ್ ನ 44 ವರ್ಷದ ನಿವಾಸಿಯೋರ್ವರು ಕಳೆದ ಮೂರು ದಿನದಿಂದ ಶೀತ, ಕೆಮ್ಮು ಜ್ವರದಿಂದ ಬಳಲುತ್ತಿದ್ದು, ಅವರನ್ನು ಶನಿವಾರ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗುವಷ್ಟರಲ್ಲಿ ಸಾವನಪ್ಪಿದ್ದಾರೆ ಎನ್ನಲಾಗಿದೆ.
ವ್ಯಕ್ತಿಯ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿದ್ದು, ಅವರಲ್ಲಿ ಕೋವಿಡ್ ಲಕ್ಷಣ ಇದ್ದ ಕಾರಣ ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ.
ಮೇಲ್ನೋಟಕ್ಕೆ ಹೃದಯಾಘಾತದಿಂದ ಸಾವಾಗಿರುವಂತೆ ಕಾಣುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ ಚಂದ್ರ ಸೂಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.













