ಎಸ್.ಎಸ್.ಎಲ್.ಸಿ. : ದ.ಕ ಪ್ರಥಮ- ಸ್ಪೀಕರ್, ಉಸ್ತುವಾರಿ ಸಚಿವರ ಅಭಿನಂದನೆ
ಮಂಗಳೂರು: ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರನ್ನು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಭಿನಂದಿಸಿದ್ದಾರೆ.
ಶೈಕ್ಷಣಿಕವಾಗಿ ಸದಾ ಘನತೆ, ಗೌರವವನ್ನು ಹೊಂದಿರುವ ಅವಿಭಜಿತ ದಕ್ಷಿಣ ಜಿಲ್ಲೆಯು ಶೈಕ್ಷಣಿಕ ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿರುವುದಿಲ್ಲ. ಈ ಹಿರಿಮೆ ಜಿಲ್ಲೆಯ ಶೈಕ್ಷಣಿಕ ಉತ್ತುಂಗಕ್ಕೆ ಕಾರಣವಾಗಿದೆ ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು ಪರಿಶ್ರಮಕ್ಕೆ ಸದಾ ಹೆಸರುವಾಸಿಯಾಗಿದ್ದು, ಫಲಿತಾಂಶವು ಅದರ ಪ್ರತಿಫಲವಾಗಿದೆ. ಜಿಲ್ಲೆಯ ಶೈಕ್ಷಣಿಕ ಹಿರಿಮೆಯು ಉನ್ನತ ಮಟ್ಟದಲ್ಲಿ ಮುಂದುವರಿದಿರುವುದು ಶ್ಲಾಘನೀಯ ಎಂದು ಅವರು ಅಭಿನಂದಿಸಿದ್ದಾರೆ.













