ಎಸ್ ಐ ಆರ್ ನಿಂದ ಮತದಾನದ ಹಕ್ಕು ಕಳೆದುಕೊಳ್ಳುವುದಿಲ್ಲ : ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್

Spread the love

ಎಸ್ ಐ ಆರ್ ನಿಂದ ಮತದಾನದ ಹಕ್ಕು ಕಳೆದುಕೊಳ್ಳುವುದಿಲ್ಲ : ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್

ಮಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆಯಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದಿಲ್ಲ ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಎಸ್ ಐ ಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರಿಗೆ ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ ಬೇಡ. ಎಸ್ ಐ ಆರ್ ನಂತರ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟು ಹೋದರೆ, ನಮೂನೆ 6 ಸಲ್ಲಿಸುವ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಮತದಾರರಿಗೆ ಈಗಾಗಲೇ ಎನ್ಯುಮರೇಷನ್ ಫಾರಂ ಗಳನ್ನು ವಿತರಿಸಲಾಗಿದೆ. ಮತದಾರರಿಂದ ಎನ್ಯುಮರೇಷನ್ ಫಾರಂ ಪಡೆದ ಬಳಿಕ ಅವುಗಳ ಡಿಜಿಟೈಸ್ ಪ್ರಕ್ರಿಯೆ ತ್ವರಿತಗೊಳಿಸಬೇಕು. ಮತದಾರರು ನಿಗದಿತ ಕಾಲಾವಧಿಯಲ್ಲಿ ಫಾರಂ ಹಿಂದಿರುಗಿಸಲು ಸಾಧ್ಯವಾಗದಿದ್ದರೆ, ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರ ಫಾರಂ 6 ಸಲ್ಲಿಸಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ನಿಗದಿತ ದಾಖಲೆಗಳು ಹಾಗೂ ಡಿಕ್ಲರೇಶನ್ ಸಲ್ಲಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಮತದಾರರ ಗೈರು, ಸ್ಥಳಾಂತರ, ಮರಣ, ಡುಪ್ಲಿಕೇಟ್ (ASDD) ಪ್ರಕರಣಗಳನ್ನು ಸಮಗ್ರವಾಗಿ ಪರಿಶೀಲಿಸಿ ಮಹಜರ್ ಮಾಡಬೇಕು. ಇದರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಏಜೆಂಟರಿಗೂ ನೀಡಬೇಕು. ಇದರಲ್ಲಿ ಬದಲಾವಣೆ ಅಗತ್ಯವಿದ್ದರೆ ಪರಿಶೀಲಿಸಿ ವಿವರ ನಮೂದಿಸಬೇಕು ಎಂದು ಅನ್ಬುಕುಮಾರ್ ಹೇಳಿದರು.

ಡಿಜಿಟೈಸ್ ಪ್ರಕ್ರಿಯೆ ತ್ವರಿತವಾಗಿ ಮುಗಿಸಿದರೆ, ಕರಡು ಮತದಾರರ ಪಟ್ಟಿಯ ಪ್ರಕಟಣೆಗೆ ಸಿದ್ಧತೆ ಮಾಡಿಕೊಳ್ಳಲು ನೆರವಾಗಲಿದೆ. ಈ ನಿಟ್ಟಿನಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಂಬಂಧಿತ ಅಧಿಕಾರಿಗಳು ಗಮನಹರಿಸಬೇಕು ಎಂದು ರಾಜ್ಯ ಚುನಾವಣಾಧಿಕಾರಿಗಳು ತಿಳಿಸಿದರು.

ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18,03,766 ಮತದಾರರಿದ್ದು, ಎಲ್ಲರಿಗೂ ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. ಈ ಪೈಕಿ 14,97,139 ಫಾರಂಗಳನ್ನು ಡಿಜಿಟೈಸ್ ಮಾಡಿ, ಶೇಕಡಾ 83 ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು. ಇದುವರೆಗೆ ಜಿಲ್ಲೆಯಲ್ಲಿ 65588 ಮತದಾರರನ್ನು ASDD ಎಂದು ಗುರುತಿಸಲಾಗಿದೆ. ಮತದಾರರಿಗೆ ನೆರವಾಗಲು ಜಿಲ್ಲೆಯಲ್ಲಿ 1098 ಸೌಲಭ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಟೋಲ್ ಫ್ರೀ ಸಂಖ್ಯೆ 1950 ಸಹಾಯವಾಣಿ ತೆರೆಯಲಾಗಿದ್ದು, ಮತದಾರರ ಪ್ರಶ್ನೆ ಮತ್ತು ಸಂಶಯಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ರಾಜು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಮತಗಟ್ಟೆ ಭೇಟಿ
ಸಭೆಯ ನಂತರ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಪಿತಾನಿಯೋ ಶಾಲೆ ಮತಗಟ್ಟೆಗೆ ಭೇಟಿ ನೀಡಿ ಎಸ್ ಐ ಆರ್ ಪ್ರಕ್ರಿಯೆ ಪರಿಶೀಲಿಸಿದರು. ಬಿ ಎಲ್ ಒ ಗಳು ಪಡೆದ ಏನುಮರೇಷನ್ ಫಾರಂ ಗಳನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡಿದರು. ಮತಗಟ್ಟೆಯಲ್ಲಿ ಮತದಾರರಿಗೆ ಏರ್ಪಡಿಸಿದ ಸೌಲಭ್ಯ ಮತ್ತು ಸಿದ್ಧತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ಉಪವಿಭಾಗದಿಕಾರಿ ಮೀನಾಕ್ಷಿ ಆರ್ಯ, ಮಹಾನಗರಪಾಲಿಕೆ ಉಪ ಆಯುಕ್ತೆ ಅಕ್ಷತಾ ಮತ್ತಿತರರು ಈ ಸಂದರ್ಭದಲ್ಲಿದ್ದರು.


Spread the love
Subscribe
Notify of

0 Comments