ಐಟಿಐ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ: ಮನೋಹರ್ ಆರ್ ಕಾಮತ್ 

Spread the love

ಐಟಿಐ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ: ಮನೋಹರ್ ಆರ್ ಕಾಮತ್ 

ನಾಡಾ ಐಟಿಐ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

ಕುಂದಾಪುರ: ಎಸ್ಎಸ್ಎಲ್‌ಸಿ ಶಿಕ್ಷಣದ ನಂತರ ಕನಿಷ್ಠ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಶಿಕ್ಷಣ ಪಡೆದುಕೊಳ್ಳುವ ಐಟಿಐ ವಿದ್ಯಾರ್ಥಿಗಳಿಗೆ ಬೇರೆ ಶಿಕ್ಷಣ ಪದವಿ ಪಡೆದುಕೊಳ್ಳುವರಿಗಿಂತ ಹೆಚ್ಚಿನ ಉದ್ಯೋಗಾವಕಾಶಗಳು ದೊರಕುತ್ತಿದೆ ಎಂದು ಪ್ರಾಂಶುಪಾಲ ಮನೋಹರ್ ಆರ್ ಕಾಮತ್ ಅಭಿಪ್ರಾಯಪಟ್ಟರು.

ನಾಡಾ ರೇ.ಫಾ.ರೋಬರ್ಟ್ ಜ್ಹಡ್ ಎಂ ಡಿಸೋಜಾ ಐಟಿಐ ಕಾಲೇಜಿನಲ್ಲಿ ಸೋಮವಾರ ಬೆಂಗಳೂರಿನ ಅಧ್ವೈತ್ ಮೋಟಾರ್ಸ್ ಸಂಸ್ಥೆಯಿಂದ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಆತ್ಮನಿರ್ಭರ ಹಾಗೂ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗೆ ಸಿಗುವ ಪ್ರೋತ್ಸಾಹದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಐಟಿಐ ಶಿಕ್ಷಣ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಉತ್ತಮ ವೇತನ ಹಾಗೂ ಸೌಲಭ್ಯಗಳೊಂದಿಗೆ ಉದ್ಯೋಗ ಭದ್ರತೆಯೂ ದೊರಕುತ್ತಿದೆ. ಕಳೆದ ಒಂದು ತಿಂಗಳ ಅಂತರದಲ್ಲಿ ಬೆಂಗಳೂರಿನ ಅಟ್ಲಾಂಟ್, ಉಡುಪಿಯ ಆಭರಣ, ಮಂಗಳೂರಿನ ಮೆಡಿಟೆಕ್, ಅರವಿಂದ್ ಮೋಟಾರ್ಸ್ ಸೇರಿದಂತೆ ಹತ್ತು ಹಲವು ಕಂಪೆನಿಗಳು ಸಂಸ್ಥೆಗೆ ಕ್ಯಾಂಪಸ್ ಸಂದರ್ಶನಕ್ಕಾಗಿ ಬರುತ್ತಿದ್ದು, ಇನ್ನೂ ಹಲವು ಕಂಪೆನಿಗಳಿಂದ ಬೇಡಿಕೆ ಇದ್ದು, ದೇಶದ ಕೈಗಾರಿಕಾ ಬೆಳವಣಿಗೆಯಲ್ಲಿ ಇದೊಂದು ಉತ್ತಮ ಮೈಲುಗಲ್ಲು ಎಂದು ಹೇಳಿದರು.

ಬೆಂಗಳೂರಿನ ಅಧ್ವೈತ್ ಮೋಟಾರ್ಸ್ ಸಂಸ್ಥೆಯ ಎಚ್‌ಆರ್ ಪೂರ್ಣಿಮಾ ಅವರು, ಕಳೆದ ಮೂರು ವರ್ಷಗಳಿಂದ ನಾಡಾ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದು, ಒಳ್ಳೆಯ ಪರಿಶ್ರಮದ ಸೇವೆ ನೀಡುತ್ತಿದ್ದಾರೆ. ನಮ್ಮಲ್ಲಿನ ಉದ್ಯೋಗಿಗಳಿಗೆ ಅವಶ್ಯಕವಾಗಿರುವ ಅಡ್ವಾನ್ಸ್ ತರಬೇತಿ, ಪಿಎಫ್, ವಾಸ್ತವ್ಯ, ಇಎಸ್‌ಐ ಸೇರಿದಂತೆ ಅಗತ್ಯ ಸೌಲಭ್ಯಗಳೊಂದಿಗೆ ಉತ್ತಮ ತರಬೇತಿ ಭತ್ಯೆ ಹಾಗೂ ವೇತನ ನೀಡಲಾಗುತ್ತದೆ ಎಂದು ವಿವರ ನೀಡಿದರು.

ಬೆಂಗಳೂರಿನ ಅಧ್ವೈತ್ ಮೋಟಾರ್ಸ್ ಸಂಸ್ಥೆಯ ಸೇವಾ ವ್ಯವಸ್ಥಾಪಕ ಶರತ್‌ಕುಮಾರ, ರೇ.ಫಾ.ರಾಬರ್ಟ್ ಜ್ಹಡ್ ಎಂ ಡಿಸೋಜಾ ಸ್ಮಾರಕ ಸೊಸೈಟಿಯ ಕಾರ್ಯದರ್ಶಿ ನವೀನ್ ಲೋಬೊ, ಪ್ಲೆಸ್ಮೆಂಟ್ ಅಧಿಕಾರಿ ರಾಜೇಶ್ ಕೆ.ಸಿ, ಕಿರಿಯ ತರಬೇತಿ ಅಧಿಕಾರಿಗಳಾದ ರಾಘವೇಂದ್ರ ಆಚಾರ್, ಯೋಗೀಶ್ ಬಂಕೇಶ್ವರ್ ಇದ್ದರು.


Spread the love
Subscribe
Notify of

0 Comments
Inline Feedbacks
View all comments