ಐಷಾರಾಮಿ ಕಾರು ಅಕ್ರಮ ನೋಂದಣಿ: ಆರ್ ಟಿ ಒ ಅಧಿಕಾರಿಗಳ ವಿರುದ್ದ ಲೋಕಾಯುಕ್ತದಿಂದ ಪ್ರಕರಣ ದಾಖಲು
ಉಡುಪಿ: ವಿದೇಶದಿಂದ ಆಮದು ಮಾಡಿಕೊಂಡಿರುವ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರನ್ನು ಅಕ್ರಮವಾಗಿ ನೋಂದಣಿ ಮಾಡಿ ಸರ್ಕಾರಕ್ಕೆ ಅಂದಾಜು ಕೋಟ್ಯಂತರ ರೂಪಾಯಿ ರಸ್ತೆ ತೆರಿಗೆ ನಷ್ಟ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಕುರಿತು ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ಮಾಹಿತಿ ಸಂಗ್ರಹಣೆ ನಡೆಸಿ, ಸಂಬಂಧಪಟ್ಟ ದಾಖಲೆಗಳನ್ನು ಪಡೆದು ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಓ)ಯಲ್ಲಿ ಪರಿಶೀಲನೆ ನಡೆಸಿದರು. ತನಿಖೆಯ ವೇಳೆ ಸುಮಾರು 2 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರಿನ ಮೂಲ ಮಾಡೆಲ್ ಮಾಹಿತಿಯನ್ನು ಬದಲಾಯಿಸಿ, ಅದೇ ಕಂಪನಿಯ ಕಡಿಮೆ ಬೆಲೆಯ ಕಾರಿನ ಮಾಡೆಲ್ ಎಂದು ದಾಖಲೆಗಳಲ್ಲಿ ತಿದ್ದುಪಡಿ ಮಾಡಿ, 2017ರ ಮಾಡೆಲ್ ಕಾರನ್ನು 2025ರ ಫೆಬ್ರವರಿಯಲ್ಲಿ ನೋಂದಣಿ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಪ್ರಕ್ರಿಯೆಯಲ್ಲಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ನಷ್ಟ ಉಂಟು ಮಾಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಇದನ್ನು ಆಧರಿಸಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿ ಅಗತ್ಯ ಅನುಮತಿ ಪಡೆದು, ಉಡುಪಿ ಹಾಗೂ ಮಂಗಳೂರು ಆರ್ಟಿಓ ಕಚೇರಿಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ನವೆಂಬರ್ 17ರಂದು ಪ್ರಕರಣ ದಾಖಲಿಸಲಾಗಿದೆ. ಅಧಿಕಾರ ದುರ್ಬಳಕೆ ಹಾಗೂ ದಾಖಲೆ ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಉಡುಪಿ ಲೋಕಾಯುಕ್ತ ಪೊಲೀಸ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.













