ಕರಾವಳಿಯಲ್ಲಿ ಸಾಂಸ್ಕೃತಿಕ ವಲಯಕ್ಕೆ ಆತಂಕ, ಕಲಾವಿದರು, ಸೌಂಡ್ಸ್-ಮ್ಯೂಸಿಕ್ಸ್ ಒಕ್ಕೂಟದಿಂದ ಸೆ.9ರಂದು ಜನಜಾಗೃತಿ ಸಭೆ
ಮಂಗಳೂರು: ರಾತ್ರಿ ವೇಳೆ ಧ್ವನಿ ವರ್ಧಕ ನಿಷೇಧದಿಂದಾಗಿ ಕರಾವಳಿಯಲ್ಲಿ ಸಾಂಸ್ಕೃತಿಕ ವಲಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ನಾಟಕ, ಯಕ್ಷಗಾನ, ಜಾತ್ರೆಯನ್ನು ಪೊಲೀಸರು ನಿಲ್ಲಿಸುತ್ತಿದ್ದಾರೆ. ಏಕಾಏಕಿ ಈ ರೀತಿಯ ಕಾನೂನು ಹೇರುತ್ತಿರುವುದರಿಂದ ಸಾಂಸ್ಕೃತಿಕ ವಲಯ ಆತಂಕಕ್ಕೆ ಒಳಗಾಗಿದೆ. ಇದನ್ನು ವಿರೋಧಿಸಿ ಸೆ.9ರಂದು ಕದ್ರಿಯ ಗೋರಕ್ಷನಾಥ ಹಾಲ್ ನಲ್ಲಿ ನಾಟಕ, ಯಕ್ಷಗಾನ ಕಲಾವಿದರು, ಸೌಂಡ್ಸ್, ಮ್ಯೂಸಿಕ್, ಶಾಮಿಯಾನ ಹೀಗೆ ಎಲ್ಲ ವಿಭಾಗದವರು ಸೇರಿ ಜನಜಾಗೃತಿ ಸಭೆ ನಡೆಸಲಿದ್ದಾರೆ ಎಂದು ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಹಲವು ಸಂಘಟನೆಗಳ ವತಿಯಿಂದ ಸುದ್ದಿಗೋಷ್ಟಿ ನಡೆಸಿದ್ದು ನೂರಾರು ವರ್ಷಗಳಿಂದ ಯಕ್ಷಗಾನ, ನಾಟಕ ರಂಗಭೂಮಿ ನಡೆದುಬಂದಿದೆ. ಆದರೆ ಈಗಿನ ಕಾಲದಲ್ಲಿ ಧ್ವನಿವರ್ಧಕ ಇಲ್ಲದೆ ಕಾರ್ಯಕ್ರಮ ನಡೆಸುವ ಸ್ಥಿತಿ ಇಲ್ಲ. ರಾತ್ರಿ 10 ಗಂಟೆ ನಂತರ ಧ್ವನಿ ವರ್ಧಕ ಬಳಸಬಾರದೆಂಬ ನೀತಿಯಿಂದಾಗಿ ಇದನ್ನೇ ನಂಬಿಕೊಂಡ ಕಲಾವಿದರು, ಅದಕ್ಕೆ ಸಂಬಂಧಿತ ಸೌಂಡ್ಸ್ ಲೈಟ್ಸ್ ಶಾಮಿಯಾನ, ಇನ್ನಿತರ ಎಲ್ಲ ಜನರೂ ತೊಂದರೆಗೀಡಾಗಿದ್ದಾರೆ. ಈಗ ನಾಟಕ, ಯಕ್ಷಗಾನ ಮುಂದೆ ಕೋಲ, ದೇವರ ಬಲಿಗೂ ಇಂಥದ್ದೇ ತೊಂದರೆ ಎದುರಾಗಲಿದೆ. ಅಕ್ಟೋಬರ್ ನಂತರ ಉತ್ಸವ, ಯಕ್ಷಗಾನ ಸೀಸನ್ ಶುರುವಾಗಲಿದ್ದು ಇದಕ್ಕಾಗಿ ಸರಕಾರದ ಗಮನ ಸೆಳೆಯಲು ಜನಜಾಗೃತಿ ಸಭೆ ನಡೆಸುತ್ತಿದ್ದೇವೆ ಎಂದರು.
ರಾಜ್ಯ ಸರಕಾರ 2022ರಲ್ಲಿ ಜಾರಿಗೆ ತಂದಿರುವ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ವರೆಗಿನ ಧ್ವನಿವರ್ಧಕ ನಿಷೇಧ ನೀತಿಯಿಂದಾಗಿ ತೊಂದರೆ ಎದುರಾಗಿದೆ, ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೀರಾ ಎಂಬ ಪ್ರಶ್ನೆಗೆ, ನಾಡಿದ್ದು ಜನಜಾಗೃತಿ ಸಭೆ ನಡೆಸುತ್ತಿದ್ದು, ಅದರಲ್ಲಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ವಿಹಿಂಪದ ಶರಣ್ ಪಂಪೈಲ್, ಪುರುಷೋತ್ತಮ್, ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.