ಕುಡುಪು ಗುಂಪು ಹತ್ಯೆ ಪ್ರಕರಣ: ಇನ್‌ಸ್ಪೆಕ್ಟರ್ ಶಿವಕುಮಾರ್ ಸಹಿತ ಮೂವರು ಪೊಲೀಸರು ಅಮಾನತು

Spread the love

ಕುಡುಪು ಗುಂಪು ಹತ್ಯೆ ಪ್ರಕರಣ: ಇನ್‌ಸ್ಪೆಕ್ಟರ್ ಶಿವಕುಮಾರ್ ಸಹಿತ ಮೂವರು ಪೊಲೀಸರು ಅಮಾನತು

ಮಂಗಳೂರು: ನಗರ ಹೊರವಲಯದ ಕುಡುಪು ಎಂಬಲ್ಲಿ ರವಿವಾರ ಎ.27ರಂದು ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ ಆರ್ ‌ಸಹಿತ ಮೂವರನ್ನು ಅಮಾನತುಗೊಳಿಸಲಾಗಿದೆ.

ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದ ಕೇರಳ ಮೂಲದ ಅಶ್ರಫ್ ಎಂಬವರನ್ನು ದುಷ್ಕರ್ಮಿಗಳು ಥಳಿಸಿ ಹತ್ಯೆಗೈದಿದ್ದರು‌. ಪ್ರಕರಣ ಬೆಳಕಿಗೆ ಬಂದರೂ ಪೊಲೀಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆಕ್ಷೇಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಪೊಲೀಸರು 20 ಮಂದಿ ಆರೋಪಿಗಳನ್ನು ‌ಬಂಧಿಸಿದ್ದರು‌.

ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಕೆ ಆರ್, ಹೆಡ್‌ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ.

ಎ.27 ರಂದು ಕುಡುಪುವಿನ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸಮಯ ಓರ್ವ ಅಪರಿಚಿತ ವ್ಯಕ್ತಿಗೆ, ಆಟಗಾರರು ಮತ್ತು ಅಲ್ಲಿ ನರೆದಿದ್ದ ಪ್ರೇಕ್ಷಕರು ಗುಂಪು ಹಲ್ಲೆ ನಡೆಸುತ್ತಿದ್ದ ಕುರಿತು ದೀಪಕ್ ಎಂಬುವರು ಪೊಲೀಸರಿಗೆ ಪೋನ್ ಕರೆ ಮಾಡಿ ತಿಳಿಸಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌, ಸಿಬ್ಬಂದಿಗಳಿಗೆ ಮಾಹಿತಿ ಬಂದಿತ್ತು. ಘಟನೆಯ ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ಗುಂಪು ಹತ್ಯೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿಲ್ಲ ಎನ್ನಲಾಗಿದೆ.

ಹಾಗಾಗಿ ಗುಂಪು ಹತ್ಯೆ ಪ್ರಕರಣವು ಮೊದಲು ಯುಡಿಆರ್ ಪ್ರಕರಣವಾಗಿ, ಬಳಿಕ ಗುಂಪು ಹತ್ಯೆ ಪ್ರಕರಣವಾಗಿ ದಾಖಲಾಯಿತು.ಗುಂಪು ಹತ್ಯೆಯ ಬಗ್ಗೆ ಮಾಹಿತಿ ತಿಳಿದಿದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತಾರದೇ ತೀವ್ರ ಕರ್ತವ್ಯ ನಿರ್ಲಕ್ಷತನ ತೋರಿದ ಆರೋಪದ ಮೇಲೆ ಮೂವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.


Spread the love
Subscribe
Notify of

0 Comments
Inline Feedbacks
View all comments