ಗಿರಿಗಿಟ್ ಪ್ರದರ್ಶನಕ್ಕೆ ನಿಷೇಧಾಜ್ಞೆ: ಸಾಮಾಜಿಕ ತಾಣದ ಅವಾಚ್ಯ ನಿಂದನೆ ವಿರುದ್ಧ ವಕೀಲರ ಸಂಘದ ದೂರು
ಮಂಗಳೂರು: ತುಳು ಚಿತ್ರ ಗಿರಿಗಿಟ್ ಪ್ರದರ್ಶನಕ್ಕೆ ತಡೆಯಾಜ್ಞೆ ಕುರಿತು ವಕೀಲರ ಸಂಘದ ಬಗ್ಗೆ ಸಾಮಾಜಿಕ ತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ, ಈ ಚರ್ಚೆಯಲ್ಲಿ ಅನಾರೋಗ್ಯಕರ ವಾದ, ಅಶ್ಲೀಲ ಮತ್ತು ಅವಾಚ್ಯ ಪದಗಳಿಂದ ಅವಹೇಳನಕಾರಿಯಾಗಿ ನಿಂದಿಸಿದ ಬಗ್ಗೆ ವಕೀಲರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಕೀಲರ ಸಂಘದ ನಿಯೋಗ ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಅವರಿಗೆ ಮನವಿ ಮಾಡಿದೆ. ಜೊತೆಗೆ, ಮಂಗಳೂರು ಬಂದರು ಪೊಲೀಸ್ ಠಾಣೆಗೆ ಈ ಬಗ್ಗೆ ಲಿಖಿತ ದೂರು ನೀಡಿದ್ದು, ವಿಕ್ಷಿಪ್ತ ಹಾಗೂ ವಿಕೃತ ಟೀಕೆಗಳನ್ನು ಬರೆದು ಸಾಮಾಜಿಕ ಸ್ವಾಸ್ಥ್ಯ ಕದಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ವಕೀಲರ ಸಂಘದ ಬಗ್ಗೆ ಮತ್ತು ತಡೆಯಾಜ್ಞೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಸಹಿತ ಗಣ್ಯರ ಬಗ್ಗೆ ಅವಾಚ್ಯ ಹಾಗೂ ಕೀಳು ಅಭಿರುಚಿಯ ನಿಂದನೆ ಮಾಡಿರುವ ಕೆಲವು ವ್ಯಕ್ತಿಗಳು ಮತ್ತು ಸ್ಕ್ರೀನ್ ಶಾಟ್‌ಗಳನ್ನು ವಕೀಲರು ಪೊಲೀಸರಿಗೆ ನೀಡಿದ್ದಾರೆ.
ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಸಂದೇಶಗಳನ್ನು ಹಾಕಿದವರನ್ನು, ಅದನ್ನು ಫಾರ್ವರ್ಡ್ ಮಾಡಿದವರನ್ನು ಮತ್ತು ಅದಕ್ಕೆ ಬೆಂಬಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಹರ್ಷ ಮತ್ತು ಬಂದರು ಪೊಲೀಸರು ವಕೀಲರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ದುಷ್ಕರ್ಮಿಗಳ ಪತ್ತೆ ಹಚ್ಚಿ ತಕ್ಷಣ ಅವರನ್ನು ವಶಕ್ಕೆ ಪಡೆಯುವ ಕಾರ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಕೀಲರ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಹಿನ್ನೆಲೆಯಲ್ಲಿ ಗಿರಿಗಿಟ್ ಚಿತ್ರದಲ್ಲಿ ನ್ಯಾಯಾಂಗ ನಿಂದನೆ ಮತ್ತು ವಕೀಲರ ಸಮುದಾಯದ ಅವಹೇಳನ ನಡೆದಿದೆ ಎಂದು ಆರೋಪಿಸಿ ಮಂಗಳೂರು ವಕೀಲರ ಸಂಘ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶರು ಈ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ್ದರು.