ಚೆಕ್ ಅಮಾನ್ಯ ಪ್ರಕರಣ: ಯಕ್ಷಧ್ರುವ ಸಹಕಾರಿ ಸಂಘಕ್ಕೆ ಜಯ, ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ ಜೆಎಂಎಫ್‌ಸಿ ನ್ಯಾಯಾಲಯ
ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಉಳ್ಳಾಲದ ನಿವಾಸಿ ಆಹ್ಮದ್ ಕಬೀರ್ ಶಿಕ್ಷೆಗೊಳಗಾದ ಆರೋಪಿ. ಮಂಗಳೂರಿನ ಯಕ್ಷಧ್ರುವ ಸಹಕಾರಿ ಸಂಘದಲ್ಲಿ ಆಟೋ ರಿಕ್ಷಾ ಖರೀದಿಸಲು ಈತ ಸಾಲ ಪಡೆದಿದ್ದ. ಕ್ಲಪ್ತ ಕಾಲದಲ್ಲಿ ಸಾಲ ಮರುಪಾವತಿ ಮಾಡದೆ ಸುಸ್ತಿದಾರನಾಗಿದ್ದ. ಈ ಹಿನ್ನೆಲೆಯಲ್ಲಿ ಆಟೋ ರಿಕ್ಷಾವನ್ನು ಹರಾಜು ಹಾಕಿದ್ದ ಸಹಕಾರಿ ಸಂಘ, ಉಳಿದ ಮೊತ್ತಕ್ಕೆ ಸಂಬಂಧಿಸಿದಂತೆ ಆರೋಪಿ ನೀಡಿದ ಚೆಕ್ ಅಮಾನ್ಯಗೊಂಡಿತ್ತು.
ಈ ಬಗ್ಗೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಹಕಾರಿ ಸಂಘ ದೂರು ದಾಖಲಿಸಿತ್ತು. ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗೆ ಚೆಕ್ ಮೊತ್ತದ ದಂಡ ಹಾಗೂ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಜೈಲು ಶಿಕ್ಷೆ ಅನುಭವಿಸಿದರೂ ದಂಡದ ಬಾಧ್ಯತೆಯಿಂದ ಆರೋಪಿ ತಪ್ಪಿಸಿಕೊಳ್ಳುವಂತಿಲ್ಲ ಎಂಬುದನ್ನು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ದಂಡದ ಮೊತ್ತವನ್ನು ಪರಿಹಾರವಾಗಿ ದೂರುದಾರ ಸಂಸ್ಥೆ ಪಡೆಯತ್ತಕ್ಕದ್ದು ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಮಂಗಳೂರಿನ 9ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಡಾ. ಶಿಲ್ಪಾ ಬ್ಯಾಡಗಿ ಅವರು ಈ ತೀರ್ಪು ನೀಡಿದ್ದಾರೆ.













