ಜನೌಷಧಿ ಕೇಂದ್ರಗಳನ್ನು ಸ್ಥಗಿತ ಆದೇಶ ಪುನರ್ ಪರಿಶೀಲಿಸುವಂತೆ ದಕ ಜಿಲ್ಲಾ ಯುವ ಜೆಡಿಎಸ್ ಮನವಿ
ಮಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಆದೇಶ ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರು ದೇಶಾದ್ಯಂತ ಯಶಸ್ವಿ ಮಾದರಿಯಾಗಿ ಹೊರಹೊಮ್ಮಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಕಡಿಮೆ ವೆಚ್ಚದಲ್ಲಿ ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಔಷಧ ಒದಗಿಸುತ್ತಿವೆ. ಕರ್ನಾಟಕದಲ್ಲಿಯೂ ನೂರಾರು ಜನೌಷಧಿ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಇಲಾಖೆಯು ಕುಂಟು ನೆಪ ಹೇಳಿ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 200ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಮುಚ್ಚಿಸುವ ಮೂಲಕ ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯುಳ್ಳ ಪಿಎಂಬಿಜೆಪಿ ಯೋಜನೆಯಡಿ, ಜನೌಷಧಿ ಕೇಂದ್ರಗಳಲ್ಲಿ ಶೇ. 70 ರಿಂದ 90 ರಷ್ಟು ಕಡಿಮೆ ಬೆಲೆಯಲ್ಲಿ ಜೆನೆರಿಕ್ ಔಷಧಿಗಳು ದೊರಕುತ್ತಿದೆ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಔಷಧ ಒದಗಿಸುತ್ತಿರುವ ಈ ಕೇಂದ್ರಗಳನ್ನು ಮುಚ್ಚುವುದರ ಹಿಂದೆ ಖಾಸಗಿ ಲಾಭಿ ಎದ್ದು ಕಾಣುತ್ತಿದ್ದು ಜನೌಷಧಿ ಕೇಂದ್ರಗಳನ್ನು ಮುಚ್ಚುವ ಕಾಂಗ್ರೆಸ್ ಸರ್ಕಾರದ ಈ ಬಡ ವಿರೋಧಿ ನಿರ್ಧಾರವನ್ನು ಬಲವಾಗಿ ವಿರೋಧಿಸುತ್ತೇವೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಈ ಆದೇಶ ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಯುವ ಜನತಾದಳ (ಜಾ) ದ.ಕ ಜಿಲ್ಲೆ ಇದರ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ಹಾಗು ಜಿಲ್ಲಾ ಸಂಘಟನಾ ಉಸ್ತುವಾರಿಯಾದ ರತೀಶ್ ಕರ್ಕೇರ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಮೊಹಮ್ಮದ್ ಅಸಿಫ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಸತ್ತಾರ್ ಬಂದರು, ಹಾಗು ಯುವ ಪಧಾದಿಕಾರಿಗಳಾದ ನಿತೇಶ್ ಪೂಜಾರಿ, ವಿನಿತ್, ರಿನಿತ್, ನಿಶಾಂತ್ ಪೂಜಾರಿ, ಸುಶಾಂತ್, ಆದರ್ಶ್ ಸುಧಾಕರ್, ಪ್ರಣಾಮ್ ಪೂಜಾರಿ, ಪ್ರೀತೇಶ್ ಮುಂತಾದವರು ಪಾಲ್ಗೊಂಡಿದ್ದರು.