ಜಬಲ್ಪುರ ದೋಣಿ ದುರಂತ: ವೈರಲ್ ಆದ ತಾಯಿ-ಮಗುವಿನ ಫೋಟೋ ಅಸಲಿಯಲ್ಲ!; ಜಿಲ್ಲಾಧಿಕಾರಿ ಸ್ಪಷ್ಟನೆ
ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಬರ್ಗಿ ಅಣೆಕಟ್ಟಿನಲ್ಲಿ ಗುರುವಾರ (ಏ.30) ಸಂಜೆ ಸಂಭವಿಸಿದ ಭೀಕರ ಕ್ರೂಸ್ ಬೋಟ್ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಈ ಘಟನೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ ಮತ್ತು ಮಗು ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿ ನೀರಿನಲ್ಲಿ ತೇಲುತ್ತಿದ್ದ ಚಿತ್ರವೊಂದು ಭಾರಿ ವೈರಲ್ ಆಗಿತ್ತು. ಆದರೆ, ಈ ಚಿತ್ರವು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ನಕಲಿ ಚಿತ್ರವಾಗಿದ್ದು, ಘಟನೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
https://x.com/i/status/2050099548841038224
ಬೋಟ್ ಮುಳುಗಿದಾಗ ತಾಯಿ ತನ್ನ ಮಗುವನ್ನು ಎದೆಗೆ ಅಪ್ಪಿಕೊಂಡ ಸ್ಥಿತಿಯಲ್ಲೇ ಪ್ರಾಣ ಬಿಟ್ಟಿದ್ದಳು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ಡೈವರ್‌ಗಳು (ಮುಳುಗುತಜ್ಞರು) ಮಾಧ್ಯಮಗಳಿಗೆ ತಿಳಿಸಿದ್ದರು. ಈ ಹೃದಯವಿದ್ರಾವಕ ಕಥೆ ಕೇಳಿ ಮರುಗಿದ್ದ ಜನರಿಗೆ, ಅದೇ ಹೊತ್ತಿಗೆ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದ ಫೋಟೋ ನಿಜವೆಂದೇ ನಂಬುವಂತೆ ಮಾಡಿತ್ತು. ಆದರೆ ಜಬಲ್‌ಪುರ ಜಿಲ್ಲಾಧಿಕಾರಿ ಅವರು ಎಕ್ಸ್ (X) ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, “ಈ ಫೋಟೋ ಎಐ ನಿರ್ಮಿತವಾದದ್ದೋ ಅಥವಾ ಬೇರೆ ಮೂಲದ್ದಾಗಿದೆ. ಬರ್ಗಿ ಕ್ರೂಸ್ ಅಪಘಾತಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ತಿಳಿಸುವ ಮೂಲಕ ಜನರಲ್ಲಿ ಮೂಡಿದ್ದ ಗೊಂದಲವನ್ನು ಪರಿಹರಿಸಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಬೋಟ್ ಪೈಲಟ್ ಸೇರಿದಂತೆ ಮೂವರನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಬೋಟ್ ಕ್ಲಬ್ ಮ್ಯಾನೇಜರ್‌ನನ್ನು ಅಮಾನತು ಮಾಡಲಾಗಿದೆ. ಪೊಲೀಸರು ಎಫ್‌ಐಆರ್ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ದುರಂತದ ಸಮಯದಲ್ಲಿ. ಇಂತಹ ಸುಳ್ಳು ಸುದ್ದಿಗಳು ಅಥವಾ ನಕಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮೃತರ ಕುಟುಂಬಸ್ಥರ ನೋವನ್ನು ಹೆಚ್ಚಿಸಬೇಡಿ ಎಂದು ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದೆ.













