ಜೆಪ್ಪುಮಹಾಕಾಳಿಪಡ್ಪು| ಕೃತಕ ಕೆರೆ ಸೃಷ್ಟಿ; ಮನೆ ಕಾಂಪೌಂಡು ಕುಸಿತ

Spread the love

ಜೆಪ್ಪುಮಹಾಕಾಳಿಪಡ್ಪು| ಕೃತಕ ಕೆರೆ ಸೃಷ್ಟಿ; ಮನೆ ಕಾಂಪೌಂಡು ಕುಸಿತ

ಮಂಗಳೂರು: ನಗರದ ಜೆಪ್ಪುಮಹಾಕಾಳಿಪಡ್ಪು ಶೆಟ್ಟಿ ಬೆಟ್ಟು ಸಮೀಪ ರೈಲ್ವೆ ಅಂಡರ್‌ಪಾಸ್ ಮತ್ತು ಸ್ಮಾರ್ಟ್‌ಸಿಟಿ ರಸ್ತೆಯ ಮಂದಗತಿ ಕಾಮಗಾರಿಯಿಂದ ಮುಂಗಾರು ಪೂರ್ವ ಮಳೆಗೆ ಸ್ಥಳೀಯ ಪರಿಸರದಲ್ಲಿ ನೀರು ನಿಂತು ವಿವಿಧ ರೀತಿಯ ಸಮಸ್ಯೆ ಸೃಷ್ಟಿಯಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿರುವ ಈ ಪರಿಸರದಲ್ಲಿ ಈಗಾಗಲೇ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಅಂಡರ್‌ಪಾಸ್‌ಗಳ ನಿರ್ಮಾಣದ ವೇಳೆ ಸರಾಗ ಮಳೆ ನೀರು ಹರಿಯುವ ವ್ಯವಸ್ಥೆ ಮಾಡದಿರುವುದು, ಕಾಮಗಾರಿಗೆ ಗುಂಡಿ ತೋಡಿ ಮುಚ್ಚದಿರುವುದು ಇತ್ಯಾದಿ ಕಾರಣಗಳಿಂದ ಪರಿಸರದಲ್ಲಿ ಕೃತಕ ಬಾವಿ ನಿರ್ಮಾಣವಾಗಿದೆ.

ಸ್ಥಳೀಯ ಶೆಟ್ಟಿ ಬೆಟ್ಟು ಮೊಯ್ಲಿ ಕೆರೆಯೂ ಈ ಸಮಸ್ಯೆಯಿಂದ ತನ್ನ ಮೂಲ ಸ್ವರೂಪ ಕಳೆದುಕೊಂಡಿದೆ. ಸ್ಮಾರ್ಟ್‌ಸಿಟಿ ವತಿಯಿಂದ ಈ ಪರಿಸರದಲ್ಲಿ ಇನ್ನೊಂದು ಕೃತಕ ಕೆರೆ ನಿರ್ಮಾಣ ಆಗಿದೆ. ಈಗಾಗಲೇ ಕೋಟ್ಯಂತರ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಂಡಿರುವ ಈ ಕೆರೆಯು ನಿರ್ವಹಣೆ ಕೊರತೆಯಿಂದ ತನ್ನ ಮೂಲ ಸ್ವರೂಪ ಕಳೆದು ಕೊಂಡಿದೆ. ಕಾಮಗಾರಿಗಾಗಿ ತೋಡಿರುವ ಗುಂಡಿಗಳಿಂದ ನೀರು ನಿಂತು ಸ್ಥಳೀಯ ಮನೆಯ ಗೋಡೆ ಬೀಳುವ ಸ್ಥಿತಿ ಉಂಟಾಗಿದೆ. ಪರಿಸರದ ಮನೆಯೊಂದರ ಕಾಂಪೌಂಡು ಬಿದ್ದು ಸಮಸ್ಯೆ ಸೃಷ್ಟಿಯಾಗಿದೆ. ಒಂದೆಡೆ ಕಾಮಗಾರಿ ಕುಂಟುತ್ತಾ ಸಾಗಿರುವುದು, ಸ್ಥಳೀಯರ ಸಲಹೆ ಸೂಚನೆಗಳನ್ನು ಕಡೆಗಣಿಸಿ ಮಳೆ ನೀರು ಹರಿಯಲು ವ್ಯವಸ್ಥೆ ಮಾಡದಿರುವುದು ಮತ್ತಷ್ಟು ಅನಾಹುತಕ್ಕೆ ಕಾರಣವಾಗಲಿದೆ. ಇದಕ್ಕೆ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಗಮನ ಹರಿಸ ಬೇಕು. ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಸಾಂಕ್ರಾಮಿಕ ರೋಗಗಳಿಂದ ಜನರನ್ನು ಪಾರು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments