ಟೋಪಿ ನೌಫಾಲ್ ಕೊಲೆಯಲ್ವ, ರೈಲು ಡಿಕ್ಕಿ ಹೊಡೆದು ಸಾವು ; ತೀವ್ರ ಡ್ರಗ್ಸ್ ವ್ಯಸನಿಯಾಗಿದ್ದ ನೌಫಾಲ್ ತನ್ನ ಸಾವನ್ನು ತಾನೇ ತಂದುಕೊಂಡನೇ?
ಮಂಗಳೂರು: ನಗರ ವ್ಯಾಪ್ತಿಯ ನಟೋರಿಯಸ್ ರೌಡಿಶೀಟರ್ ಟೋಪಿ ನೌಫಾಲ್(42) ಕೊಲೆಯಾಗಿದ್ದಲ್ಲ. ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾಗಿ ಮೃತದೇಹದ ಪೋಸ್ಟ್ ಮಾರ್ಟಂ ನಡೆಸಿದ ಕಾಸರಗೋಡಿನ ವೈದ್ಯರು ಮಾಹಿತಿ ನೀಡಿದ್ದಾರೆ.
ಮಂಗಳೂರು ನಗರ ವ್ಯಾಪ್ತಿಯ ನಟೋರಿಯಸ್ ರೌಡಿಶೀಟರ್ ಟೋಪಿ ನೌಫಾಲ್(42) ಕೊಲೆಯಾಗಿದ್ದಲ್ಲ, ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾಗಿ ಮೃತದೇಹದ ಪೋಸ್ಟ್ ಮಾರ್ಟಂ ನಡೆಸಿದ ಕಾಸರಗೋಡಿನ ವೈದ್ಯರು ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಬಳಿಯಲ್ಲಿ ನೌಫಾಲ್ ಮೃತದೇಹ ಲಭಿಸಿತ್ತು. ನೌಫಾಲ್ ಮಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದುದರಿಂದ ಯಾರೋ ಮಾತುಕತೆಗೆ ಕರೆದು ಕೊಲೆ ಮಾಡಿದ್ದಾರೆಂದು ಮಾಹಿತಿ ಲಭಿಸಿತ್ತು. ಕುತ್ತಿಗೆ, ತಲೆಯಲ್ಲಿ ರಕ್ತ ಜಿನುಗಿದ್ದು ಹೊಡೆದು ಹಾಕಿದ ರೀತಿಯ ಕಲೆಗಳಿದ್ದುದರಿಂದ ಯಾರೋ ಹತ್ಯೆ ಮಾಡಿದ್ದಿರಬಹುದೆಂಬ ಶಂಕೆಗಳಿದ್ದವು. ಆದರೆ ಕಾಸರಗೋಡು ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರು ತಲವಾರಿನಿಂದ ಕಡಿದು ಆಗಿರುವ ಗಾಯಗಳಲ್ಲ. ಬದಲಿಗೆ ರೈಲು ಡಿಕ್ಕಿ ಹೊಡೆದು ಆಗಿರುವ ಗಾಯಗಳೆಂದು ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಮಂಜೇಶ್ವರ ಪೊಲೀಸರು ನೌಫಾಲ್ ಆಪ್ತರು ಮತ್ತು ಅಂದು ಮೊಬೈಲ್ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ನೌಫಾಲ್ ತೀವ್ರ ರೀತಿಯ ಡ್ರಗ್ಸ್ ವ್ಯಸನಿಯಾಗಿದ್ದು ಸಿರಿಂಜ್ ಗಳಲ್ಲಿ ಡ್ರಗ್ಸ್ ಸೇವನೆ ಮಾಡದೇ ಇದ್ದರೆ ಹಾಗೇ ಉಳಿದುಕೊಳ್ಳುವುದೇ ಸಾಧ್ಯ ಇಲ್ಲ ಎನ್ನುವಷ್ಟರ ಮಟ್ಟಿಗೆ ತಲುಪಿದ್ದ ಶುಕ್ರವಾರ ಸಂಜೆ ಮಂಗಳೂರಿನಲ್ಲಿ ತನ್ನ ಆಪ್ತರ ಜೊತೆಗಿದ್ದ ನೌಫಾಲ್ ಅದೇ ದಿನ ರಾತ್ರಿ ತನ್ನ ಸ್ಕೂಟರಿನಲ್ಲಿ ಉಪ್ಪಳಕ್ಕೆ ತೆರಳಿರುವುದು ಸಿಸಿಟಿವಿ ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ಮೃತದೇಹದ ಜೊತೆಗಿದ್ದ ಪ್ಯಾಂಟ್ ಕಿಸೆಯಲ್ಲೂ ಸಿರಿಂಜ್ ಗಳಿದ್ದವು ಎನ್ನುವ ಮಾಹಿತಿ ಇದೆ.
ಉಪ್ಪಳ ಗೇಟ್ ಬಳಿ ತಡರಾತ್ರಿ ಡ್ರಗ್ಸ್ ಪಡೆದಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದು ಡ್ರಗ್ಸ್ ತಲುಪಿಸಿದ್ದು ಯಾರೆನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಡ್ರಗ್ಸ್ ಪಡೆದ ಬಳಿಕ ರೈಲ್ವೇ ಹಳಿಯಲ್ಲೇ ಕುಳಿತಿದ್ದನೇ ಅಥವಾ ಅಮಲಿನಲ್ಲಿ ನಿಂತುಕೊಂಡಿದ್ದಾಗಲೇ ರೈಲು ಬಡಿದು ಹೋಗಿದೆಯಾ ಎನ್ನುವುದು ಖಚಿತವಾಗಿಲ್ಲ. ಈ ಅಂಶಗಳನ್ನು ಆಧರಿಸಿ ಮಂಜೇಶ್ವರ ಪೊಲೀಸರು ನೌಫಾಲ್ ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುತ್ತಿದ್ದಾರೆ. ಆದರೆ ನೌಫಾಲ್ ಸಾವಿಗೆ ಶರಣಾಗುವಷ್ಟು ಅಧೀರನಾಗಿರಲಿಲ್ಲ. ರೈಲು ಬಡಿದು ಆಕಸ್ಮಿಕ ಮೃತಪಟ್ಟಿರಬಹುದು ಎಂದು ಮಂಗಳೂರು ಪೊಲೀಸರು ಹೇಳುತ್ತಿದ್ದಾರೆ.
ಮಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಿದ ಬಳಿಕ ವ್ಯಸನ ಅಂಟಿಸಿಕೊಂಡವರು ಡ್ರಗ್ಸ್ ಸಿಗದೆ ಚಡಪಡಿಸುತ್ತಿದ್ದಾರೆ. ನೌಫಾಲ್ ಅದೇ ಕಾರಣಕ್ಕೆ ಅಂದು ನಡುರಾತ್ರಿಯಲ್ಲೇ ನಟೋರಿಯಸ್ ರೌಡಿಯಾಗಿದ್ದರೂ ಅದ್ಯಾವುದರ ಅಳುಕೇ ಇಲ್ಲದೆ ಮಂಗಳೂರಿನ ಬಜಾಲಿನಿಂದ ಉಪ್ಪಳಕ್ಕೆ ಸ್ಕೂಟರಿನಲ್ಲೇ ತೆರಳಿದ್ದ ಎನ್ನಲಾಗುತ್ತಿದೆ. ಅಲ್ಲಿಂದ ಪತ್ನಿಗೂ ಕರೆ ಮಾಡಿದ್ದು ಇನ್ನು ಡ್ರಗ್ಸ್ ಚಟವನ್ನು ಬಿಟ್ಟು ಬಿಡುತ್ತೇನೆ ಎಂದೂ ಹೇಳಿದ್ದ ಆದರೆ ಅದೇ ರಾತ್ರಿಯಲ್ಲಿ ಜವರಾಯ ಅಟ್ಟಿಸಿಕೊಂಡು ಬಂದಿರುವಂತೆ ಕಾಣುತ್ತಿದೆ. ರೈಲ್ವೇ ಗೇಟ್ ಬಳಿಯಲ್ಲೇ ಡ್ರಗ್ಸ್ ಪಡೆದು ತನ್ನ ಸಾವನ್ನು ತಾನೇ ತಂದುಕೊಂಡಿದ್ದಾನೆ ಎನ್ನುವ ಮಾಹಿತಿ ಪೊಲೀಸರಿಂದ ಲಭಿಸಿದೆ.
ಶನಿವಾರ ಬೆಳಗ್ಗೆ ನೌಫಾಲ್ ಕೊಲೆಯಾಗಿದೆ ಎಂದು ಸುದ್ದಿಯಾಗುತ್ತಿದ್ದಂತೆ ಮೃತದೇಹ ಇರಿಸಿದ್ದ ಕಾಸರಗೋಡು ಮೆಡಿಕಲ್ ಆಸ್ಪತ್ರೆಯ ಬಳಿ ಹಲವಾರು ಜನರು ಜಮಾಯಿಸಿದ್ದರು. ಮುಸ್ಲಿಮ್ ಗೆಳೆಯರ ನಡುವೆ ನೌಫಾಲ್ ಗೆ ಆಗದವರೇ ಯಾರೋ ಈ ಕೃತ್ಯ ಮಾಡಿಸಿದ್ದಾರೆ ಎಂಬ ಮಾತುಗಳನ್ನು ಹೇಳತೊಡಗಿದ್ದರು. ಮಾರಿಪಳ್ಳ ಜಬ್ಬಾರ್, ತಲ್ಲತ್, ಈ ಹಿಂದೆ ಕೊಲೆಯಾಗಿದ್ದ ಕಾಲಿಯಾ ರಫೀಕ್ ಗ್ಯಾಂಗ್ ಬಗ್ಗೆಯೂ ಮಾತುಗಳು ಕೇಳಿಬಂದಿದ್ದವು. ಆಸ್ಪತ್ರೆ ಬಳಿ ಜನರು ವಾಗ್ವಾದ ನಡೆಸುತ್ತಿದ್ದಾಗ ಅಲ್ಲಿ ಸೇರಿದ್ದ ಕಾಲಿಯಾ ರಫೀಕ್ ಪುತ್ರನನ್ನು ಪೊಲೀಸರು ಶಂಕೆಯ ಮೇರೆಗೆ ವಶಕ್ಕೆ ಪಡೆದಿದ್ದರು. ಆದರೆ ಆತನನ್ನು ವಿಚಾರಣೆ ನಡೆಸಿದ ಬಳಿಕ ಬಿಟ್ಟು ಕಳುಹಿಸಿದ್ದರು.













