ನಂದಿನಿ ನದಿ ಅತಿಕ್ರಮಣದ ವಿರುದ್ಧ ಅಧಿಕಾರಿಗಳ ನಿರ್ಲಕ್ಷ್ಯ : ಉಪ ಲೋಕಾಯುಕ್ತ ಎಚ್ಚರಿಕೆ
ಮಂಗಳೂರು: ಸುರತ್ಕಲ್ ಸಮೀಪದ ಮುಕ್ಕ ಮತ್ತು ಖಂಡಿಗೆ ಬಳಿ ನಂದಿನಿ ನದಿಯ ಅತಿಕ್ರಮಣ ಮತ್ತು ಕಲುಷಿತ ನೀರು ಸೇರ್ಪಡೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತಾಳಿರುವುದನ್ನು ಉಪ ಲೋಕಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಈ ಕೃತ್ಯಕ್ಕೆ ಸಂಬಂಧಿಸಿ ಈಗಾಗಲೇ ಸುಮೊಟೊ ಪ್ರಕರಣ ದಾಖಲಿಸಲಾಗಿದೆ. ಆದರೆ ಎಂಟು ತಿಂಗಳು ಕಳೆದರೂ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗದಿರುವ ಬಗ್ಗೆ ಉಪಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ.20ರಂದು ನಡೆಯುವ ವಿಚಾರಣೆಗೆ ಮುನ್ನ ಸೂಕ್ತ ಕ್ರಮ ವಹಿಸದಿದ್ದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಾ.24ರಂದು ಲೋಕಾಯುಕ್ತರು ಸುಮೊಟೊ ಪ್ರಕರಣ ದಾಖಲಿಸಿದ್ದು, ಪ್ರಕರಣದಲ್ಲಿ ಮನಪಾ ಒಳ ಚರಂಡಿ ವಿಭಾಗ (ಸುರತ್ಕಲ್ ವಲಯ) ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಲಿಂಗಪ್ಪ, ಮನಪಾ ಸಹಾಯಕ ನಗರ ಯೋಜನಾಧಿಕಾರಿಗಳಾದ ಗುರು ಪ್ರಸಾದ್, ಲಾವಣ್ಯ, ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಮುಡಾ ನಗರ ಯೋಜಕ ರಘು ಜಿ.ಆರ್., ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಎಂ.ತಾಜುದ್ದೀನ್ ಉಬೈದ್, ಮೆಸ್ಕಾಂ ಸುರತ್ಕಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರತಾಪ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ, ಸುರತ್ಕಲ್ ಹೋಬಳಿಯ ಕಂದಾಯ ನಿರೀಕ್ಷಕ ಪ್ರಸಾದ್ ಎನ್.ಜಿ., ಇಡ್ಯಾ ಗ್ರಾಮ ಆಡಳಿತಾಧಿಕಾರಿ ಕೆ. ಸಂತೋಷ್ ಅವರನ್ನು ಎದುರುದಾರರನ್ನಾಗಿಸಲಾಗಿತ್ತು.
ಮೊದಲನೇ ಎದುರುದಾರ ಶಿವಲಿಂಗಪ್ಪತನಗೆ ವರ್ಗಾವಣೆ ಆಗಿರುವುದಾಗಿ ತಿಳಿಸಿರುವುದರಿಂದ ಕಾರ್ಯಪಾಲಕ ಅಭಿಯಂತರ-2 ಪಿ.ಎಸ್. ಜ್ಞಾನೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕಾರ್ತಿಕ್ ಶೆಟ್ಟಿ, ಕಿರಿಯ ಅಭಿಯಂತರ ಯತೀಶ್ ಎಂ.ಎಸ್. ಅವರನ್ನು ಎದುರುದಾರರು 12 – 14 ಎಂದು ಸೇರ್ಪಡೆಗೊಳಿಸಲಾಗಿದೆ. ಮಂಗಳೂರು ಸಹಾಯಕ ಆಯುಕ್ತರು ಮತ್ತು ಪೊಲೀಸ್ ಸಹಾಯಕ ಆಯುಕ್ತರನ್ನು 15 ಮತ್ತು 16ನೇ ಎದುರುದಾರರಾಗಿ ಮಾಡಲಾಗಿದೆ. ಈ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎಲ್ಲ ಎದುರುದಾರರು ಯಾವ ರೀತಿ ಕ್ರಮಕೈಗೊಳ್ಳುತ್ತಿದ್ದಾರೆ ಎಂದು ಪರಿಶೀಲಿಸಿ ಪ್ರತ್ಯೇಕ ವರದಿ ನೀಡಬೇಕು. ದ.ಕ. ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರೂ ಕೂಡ ಸಮಸ್ಯೆ ಬಗೆಹರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತ್ಯೇಕ ವರದಿ ತಯಾರಿಸಿ ಸಲ್ಲಿಸಬೇಕು ಎಂದು ಉಪ ಲೋಕಾಯುಕ್ತರು ಸೂಚಿಸಿದ್ದಾರೆ.
ಮುಂದಿನ ವಿಚಾರಣೆಯ ದಿನಾಂಕದೊಳಗೆ ಮಂಗಳೂರು ಸಹಾಯಕ ಆಯುಕ್ತರು ಮತ್ತು ಸಹಾಯಕ ಪೊಲೀಸ್ ಆಯುಕ್ತರು ಸೇರಿದಂತೆ ಪ್ರತಿವಾದಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪಲೋಕಾಯುಕ್ತರು ಎಚ್ಚರಿಕೆ ನೀಡಿದ್ದಾರೆ.













