ಪಡುಬಿದ್ರೆ- ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ಅಕ್ರಮ ರಚನೆ ಕೆಡವಲು ಅರಣ್ಯ ಪರಿಸರ ಸಂಘ ಒತ್ತಾಯ

Spread the love

ಪಡುಬಿದ್ರೆ- ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ಅಕ್ರಮ ರಚನೆ ಕೆಡವಲು ಅರಣ್ಯ ಪರಿಸರ ಸಂಘ ಒತ್ತಾಯ

ಮಂಗಳೂರು: ಪಡುಬಿದ್ರಿಯಿಂದ ಕಾಸರಗೋಡಿಗೆ 400 ಕೆವಿ ವಿದ್ಯುತ್ ಮಾರ್ಗಕ್ಕೆ ಬೇಕಾದ ಮೂರು ಹಂತದ ಅನುಮತಿ ಪಡೆಯದೆ, ನಿರ್ಮಾಣವಾದ ಎಲ್ಲ ವಿದ್ಯುತ್ ಗೋಪುರಗಳು ಸೇರಿದಂತೆ ಅಕ್ರಮ ರಚನೆಗಳನ್ನು ಕೆಡವಬೇಕು ಎಂದು ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಂಘಟನೆಯ ಕಾರ್ಯದರ್ಶಿ ಬೆನೆಡಿಕ್ಟ್ ಫರ್ನಾಂಡಿಸ್, ಕಾನೂನು ಮೀರಿ ಅಕ್ರಮವಾಗಿ ಲಕ್ಷಾಂತರ ಮರಗಳನ್ನು ಕಡಿದು ವಿದ್ಯುತ್ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಮೂರು ಹಂತದ ಅನುಮತಿಗಳಲ್ಲಿ ಕೇವಲ ಒಂದು ಹಂತದ ಅನುಮತಿ ಮಾತ್ರ ಪಡೆಯಲಾಗಿದೆ. ಈ ಕುರಿತು ಈಗಾಗಲೇ ರಾಷ್ಟ್ರೀಯ ಹಸಿರು ಪೀಠದಲ್ಲಿ ದಾವೆ ಹೂಡಿದ್ದೇವೆ. ಈ ಕುರಿತ ಮುಂದಿನ ವಿಚಾರಣೆಯ ಸೆಪ್ಟೆಂಬರ್ 4ಕ್ಕೆ ನಿಗದಿಯಾಗಿದೆ. ಕಾನೂನು ವ್ಯಾಪ್ತಿಯನ್ನು ಮೀರಿ ನಡೆಯುತ್ತಿರುವ ಈ ಕಾಮಗಾರಿಯನ್ನು ತಕ್ಷಣ ನಿಲ್ಲಿಸಲು ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮುಂದಾಗಬೇಕು ಎಂದರು.

ಒಟ್ಟು 115 ಕಿಲೋ ಮೀಟರ್ ದೂರದ ಈ ಪ್ರಸರಣ ಮಾರ್ಗದ ಕಾಮಗಾರಿ ನಡೆಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಹಂತ-1ರ ತಾತ್ವಿಕ ಅನುಮೋದನೆಯನ್ನು ಮಾತ್ರ ಪಡೆದುಕೊಳ್ಳಲಾಗಿದೆ. ಆದರೆ ಹಂತ-2ರ ಪರಿಸರ ಅನುಮತಿ ಮತ್ತು ಜೈವಿಕ ವೈವಿಧ್ಯತೆ ಅನುಮತಿಯನ್ನಾಗಲೀ, 3ನೇ ಹಂತದ ಬಯೋ ಡೈವರ್ಸಿಟಿ ಅನುಮತಿಯನ್ನಾಗಿ ಪಡೆದಿಲ್ಲ. ಎಲ್ಲ ಮೂರೂ ಅನುಮತಿಗಳನ್ನು ಪಡೆದ ನಂತರವೇ ಕಾಮಗಾರಿ ಆರಂಭಿಸಬೇಕಾಗಿತ್ತು. ಆದರೆ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಈಗಾಗಲೇ 35 ಗೋಪುರಗಳನ್ನು ನಿರ್ಮಾಣ ಮಾಡಿದ್ದಾರೆ. ವಿದ್ಯುತ್ ಮಾರ್ಗ ನಿರ್ಮಾಣ ಕುರಿತಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತ್ಯೇಕ ಕಾನೂನುಗಳಿವೆ. ಅದನ್ನು ಸಂಪೂರ್ಣವಾಗಿ ಪಾಲನೆ ಮಾಡಿದ ನಂತರವೇ ಮುಂದುವರಿಯಬೇಕು. ಆದರೆ ಈ ವಿದ್ಯುತ್ ಮಾರ್ಗದಲ್ಲಿ ಅದು ಸಾಕಾರ ಆಗಿಲ್ಲ ಎಂದು ಅವರು ಆರೋಪಿಸಿದರು.

ಪೂರಕ ಅನುಮತಿಗಳನ್ನೇ ಪಡೆಯದೆ ಖಾಸಗಿ ಸಂಸ್ಥೆಯು ಅಮಾಯಕರು, ಅದರಲ್ಲೂ ಮುಖ್ಯವಾಗಿ ಒಂಟಿ ಮಹಿಳೆಯರ ಆಸ್ತಿಗಳನ್ನು ಬಲವಂತವಾಗಿ ಅತಿಕ್ರಮಿಸಿ ದೌರ್ಜನ್ಯ ಎಸಗಿ ವಿದ್ಯುತ್ ಟವರ್‌ಗಳನ್ನು ಸ್ಥಾಪಿಸುತ್ತಿದ್ದಾರೆ. ಈ ಅಕ್ರಮ ಕಾಮಗಾರಿಗೆ ಜಿಲ್ಲಾಡಳಿತವೇ ಪೊಲೀಸ್ ರಕ್ಷಣೆ ಒದಗಿಸುತ್ತಿದೆ ಎಂದು ಬೆನೆಡಿಕ್ಟ್ ಫರ್ನಾಂಡಿಸ್ ಆರೋಪಿಸಿದರು.

400 ಕೆವಿ ವಿದ್ಯುತ್ ಮಾರ್ಗವು ಹಾದು ಹೋಗುವ ಸ್ಥಳೀಯರಲ್ಲಿ ಗಂಭೀರ ಆರೋಗ್ಯ ಅಪಾಯಗಳನ್ನು ಸೃಷ್ಟಿಸಲಿದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅಲ್ಲದೆ ಸುಮಾರು 1.78 ಲಕ್ಷ ಮರಗಳ ನಾಶವಾಗಿ ಪರಿಸರ ವ್ಯವಸ್ಥೆ ಹದಗೆಡಲಿದೆ. ಈ ಮರಗಳನ್ನು ಕಡಿಯುವಂತೆ ಡಿಸಿಎಫ್ ಹೊರಡಿಸಿದ ಆದೇಶಕ್ಕೆ ಈಗಾಗಲೇ ರಾಷ್ಟ್ರೀಯ ಹಸಿರು ಪೀಠ ತಡೆಯಾಜ್ಞೆ ನೀಡಿದೆ. ಇಷ್ಟಾದರೂ ಕಾಮಗಾರಿಯನ್ನು ಮುಂದುವರಿಸುತ್ತಿರುವುದು ಅಕ್ರಮ. ಇದಕ್ಕೆ ಸರ್ಕಾರ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ನಿರ್ಮಾಣವಾದ ವಿದ್ಯುತ್ ಗೋಪುರಗಳನ್ನು ಕೆಡವಿ ರೈತರ ಆಸ್ತಿಗಳನ್ನು ಮರು ಸ್ಥಾಪನೆ ಮಾಡಬೇಕು. ಇದರಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಪಾವತಿಸಬೇಕು. ಕಾಮಗಾರಿಗೆ 2ನೇ ಹಂತದ ಅನುಮತಿ ನಿರಾಕರಿಸಿ, ಪರ್ಯಾಯವಾಗಿ ಭೂಗತ ಕೇಬಲ್ ಅಳವಡಿಸುವ ನಿಟ್ಟಿನಲ್ಲಿ ಯೋಜನೆಯ ಪ್ರತಿಪಾದಕರಿಗೆ ನಿರ್ದೇಶನ ನೀಡಬೇಕು ಎಂದು ಬೆನೆಡಿಕ್ಟ್ ಫರ್ನಾಂಡಿಸ್ ಒತ್ತಾಯಿಸಿದರು.

ಸಂಘಟನೆಯ ಪ್ರಮುಖರಾದ ಆಲ್ಫೋನ್ಸ್ ಡಿಸೋಜ, ಇನ್ನ ಚಂದ್ರಹಾಸ ಶೆಟ್ಟಿ, ಕೃಷ್ಣಪ್ರಸಾದ್ ತಂತ್ರಿ ಎಡಪದವು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments