ಪುತ್ತೂರು: 106 ಕಿಲೋ ಗಾಂಜಾ ವಶ – ಇಬ್ಬರ ಬಂಧನ
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 106 ಕಿಲೋ 60 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 19-01-2026ರಂದು ಸಂಜೆ, ಕಾರು ಹಾಗೂ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಗುಣಪಾಲ ಜೆ. ಅವರ ನೇತೃತ್ವದಲ್ಲಿ ಪಡುವನ್ನೂರು ಗ್ರಾಮದ ಸಜಂಕಾಡಿ ಪ್ರದೇಶದಲ್ಲಿ ತಪಾಸಣೆ ನಡೆಸಲಾಯಿತು.
ಕಾರಿನ ಚಾಲಕ ರಫೀಕ್ ಪಿ. (37), ಹಾಗೂ ಗೂಡ್ಸ್ ವಾಹನದ ಚಾಲಕ ಅಬ್ದುಲ್ ಸಾದಿಕ್ (37), ಇಬ್ಬರೂ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾಗಿದ್ದು, ವಾಹನಗಳ ಪರಿಶೀಲನೆಯ ವೇಳೆ ಒಟ್ಟು 73 ಕಟ್ಟುಗಳಲ್ಲಿ 106.60 ಕಿಲೋ ಗಾಂಜಾ ಪತ್ತೆಯಾಗಿದೆ. ಗಾಂಜಾದ ಅಂದಾಜು ಮೌಲ್ಯ ರೂ.53.03 ಲಕ್ಷ ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಗಾಂಜಾವನ್ನು ಕೇರಳ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಗಾಂಜಾ, ಬಳಸಿದ ವಾಹನಗಳು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.09/2026 ಕಲಂ 8(c), 20(b)(ii)C NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.













