ಪುತ್ತೂರು | ಗಾಂಜಾ ಪೂರೈಕೆ ಮಾಡುತ್ತಿದ್ದ ಒರಿಸ್ಸಾದ ವ್ಯಕ್ತಿ ಸೇರಿ ಮೂವರು ಆರೋಪಿಗಳ ಬಂಧನ

Spread the love

ಪುತ್ತೂರು | ಗಾಂಜಾ ಪೂರೈಕೆ ಮಾಡುತ್ತಿದ್ದ ಒರಿಸ್ಸಾದ ವ್ಯಕ್ತಿ ಸೇರಿ ಮೂವರು ಆರೋಪಿಗಳ ಬಂಧನ

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೂ.53.03 ಲಕ್ಷ ಮೌಲ್ಯದ 1 ಕ್ವಿಂಟಾಲ್ 6 ಕೆ.ಜಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಂಜಾ ಪೂರೈಕೆ ಮಾಡುತ್ತಿದ್ದ ಒರಿಸ್ಸಾ ರಾಜ್ಯದ ವ್ಯಕ್ತಿ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 19, 2026ರಂದು ದಾಖಲಾದ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಆರೋಪಿಗಳಿಗೆ ಹಣ ಹಾಗೂ ವಾಹನದ ವ್ಯವಸ್ಥೆ ಮಾಡಿದ್ದ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ.ಕೆ. (27) ಮತ್ತು ಬೆಳ್ತಂಗಡಿ ಕಕ್ಕಿಂಜೆ ನಿವಾಸಿ ನಝಿರ್ (42) ಅವರನ್ನು ದಸ್ತಗಿರಿ ಮಾಡಿದರು.

ಇದೇ ವೇಳೆ ಆರೋಪಿಗಳಿಗೆ ಮಾದಕ ವಸ್ತು ಗಾಂಜಾವನ್ನು ಪೂರೈಕೆ ಮಾಡುತ್ತಿದ್ದ ಒರಿಸ್ಸಾ ರಾಜ್ಯದ ದೀಪಕ್ ಪಾತ್ರ (37) ಎಂಬಾತನನ್ನು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಅವರ ನೇತೃತ್ವದ ತನಿಖಾ ತಂಡವು ಒರಿಸ್ಸಾಕ್ಕೆ ತೆರಳಿ ಬಂಧಿಸಿದೆ. ಬಂಧನದ ವೇಳೆ ಆತನಿಂದ ರೂ.80,000 ಮೌಲ್ಯದ 1 ಕೆ.ಜಿ 788 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುಣಪಾಲ ಜೆ. ಹಾಗೂ ಸಿಬ್ಬಂದಿಗಳಾದ ದೇವರಾಜ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಸುಬ್ರಮಣಿ, ಭೀಮಸೇನ್, ಸುರೇಶ್ ಮತ್ತು ದಿವ್ಯಪ್ರಕಾಶ್ ಅವರುಗಳು ಭಾಗವಹಿಸಿದ್ದರು.


Spread the love